ಮಡಿಕೇರಿ, ಸೆ. 26: ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಸಂದರ್ಭ ಬುಡಕಟ್ಟು ಜನರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘ, ಆಡಳಿತ ವ್ಯವಸ್ಥೆ ವಿರುದ್ಧ ಅ.2 ರಂದು ಪ್ರತಿಭಟನಾ ಸಮಾವೇಶ ನಡೆಸುವದಾಗಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷÀ ಕುಡಿಯರ ಮುತ್ತಪ್ಪ ಸರಕಾರದ ತಾರತಮ್ಯ ನೀತಿಯನ್ನು ವಿರೋಧಿಸಿ ಸಂಘದ ನೇತೃತ್ವದಲ್ಲಿ ನಗರದಲ್ಲಿ ಬುಡಕಟ್ಟು ಸಂತ್ರಸ್ತರ ಬೃಹತ್ ಸಮಾವೇಶ ನಡೆಸುವದಾಗಿ ಹೇಳಿದರು. ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಅರಣ್ಯ ವಾಸಿಗಳು, ಬುಡಕಟ್ಟು ಜನರು ಮತ್ತು ದಲಿತರಿಗೆ ದೊರಕಬೇಕಾದ ಮೂತಭೂತ ಸೌಲಭ್ಯಗಳಾದ ರಸ್ತೆ, ಪೌಷ್ಟಿಕ ಆಹಾರ, ವಿದ್ಯುತ್‍ಚ್ಛಕ್ತಿ ಮತ್ತು ನಿವೇಶನದ ಹಕ್ಕುಪತ್ರ ಸೇರಿದಂತೆ ಹಲವು ಮಾದರಿಯ ಸರಕಾರದ ಯೋಜನೆಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಅರಣ್ಯ ಭಾಗದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆದರೆ ರಾಜ್ಯ ಸರಕಾರ ಇದನ್ನು ಕಡಿಮೆ ಪ್ರಮಾಣದಲ್ಲಿ ಹಂಚಿಕೆ ಮಾಡುತ್ತಿದೆ, ಯಾವದೇ ಆಹಾರ ಸಕಾಲದಲ್ಲಿ ದೊರೆಯುತ್ತಿಲ್ಲ ಎಂದು ಮುತ್ತಪ್ಪ ದೂರಿದರು. 94ಸಿ ಅಡಿಯಲ್ಲಿ ಪೈಸಾರಿ ಜಾಗದಲ್ಲಿ ವಾಸವಿರುವ ಬುಡಕಟ್ಟು ಜನರು ಅರ್ಜಿಸಲ್ಲಿಸಿ 2 ವರ್ಷ ಕಳೆದರೂ ಹಕ್ಕುಪತ್ರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸೋಮಯ್ಯ, ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ರತ್ನಾಕರ ಹಾಗೂ ಕಾರ್ಯದರ್ಶಿ ಕರುಂಬಯ್ಯ ಉಪಸ್ಥಿತರಿದ್ದರು.