ಸೋಮವಾರಪೇಟೆ, ಸೆ. 26: ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪಿಡಿಓಗಳ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವದು ಖಂಡನೀಯವಾಗಿದ್ದು, ಇಂತಹ ಪೂರ್ವಾಗ್ರಹ ಪೀಡಿತ ಹೇಳಿಕೆಗಳಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮನೋಸ್ಥೈರ್ಯ ಕುಸಿಯುವಂತೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಅಭಿಪ್ರಾಯಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ. ರವೀಶ್, ಪದಾಧಿಕಾರಿಗಳಾದ ರಾಕೇಶ್, ಸುಮೇಶ್, ಪೂರ್ಣಕುಮಾರ್, ಹೇಮಲತಾ ಸೇರಿದಂತೆ ಇತರರು, ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಹಲವಷ್ಟು ಒತ್ತಡಗಳ ನಡುವೆಯೂ ಪಿಡಿಓಗಳು ಮಾದರಿ ಗ್ರಾಮ ಪಂಚಾಯಿತಿಗಳ ನಿರ್ಮಾಣಕ್ಕೆ ಕಟಿಬದ್ಧರಾಗಿ ಸೇವೆ ಸಲ್ಲಿಸುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಇಲಾಖೆಗೆ ಹಲವಾರು ಪ್ರಶಸ್ತಿಗಳು ಲಭಿಸುವದಕ್ಕೆ ಕಾರಣಕರ್ತರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಇಂತಹ ಪಿಡಿಓಗಳ ವಿರುದ್ಧ ಉಸ್ತುವಾರಿ ಸಚಿವ ವಿ. ಸೋಮಣ್ಣ ನೀಡಿರುವ ಹೇಳಿಕೆ ಆಕ್ಷೇಪಾರ್ಹ ಎಂದು ಅಭಿಪ್ರಾಯಿಸಿದ್ದಾರೆ.

ಸರ್ಕಾರವೇ ರೂಪಿಸಿರುವ ಕಾನೂನಿನ ಅನ್ವಯ ಪಿಡಿಓಗಳು ಕೆಲಸ ಮಾಡುತ್ತಿದ್ದು, ಸಚಿವರು ಈ ಬಗ್ಗೆ ಯೋಚಿಸದೇ ಪಿಡಿಓಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವದು ಸಮಂಜಸವಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು, ಪ್ರಕೃತಿ ವಿಕೋಪ ಸಂದರ್ಭ ಉತ್ತಮವಾಗಿ ಕೆಲಸ ಮಾಡಿದ ಪಿಡಿಓಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದು, ಅದರಲ್ಲಿ ಭಾಗವಹಿಸಲು ಪಿಡಿಓಗಳ ಮನಸ್ಸು ಒಪ್ಪುತ್ತಿಲ್ಲ. ಸಚಿವರ ಇಂತಹ ಹೇಳಿಕೆ ಅನಿರೀಕ್ಷಿತವಾಗಿದ್ದು, ಜಿಲ್ಲೆಯ ಎಲ್ಲಾ ಪಿಡಿಓಗಳು ಸಚಿವರ ಹೇಳಿಕೆಯನ್ನು ಖಂಡಿಸುವದಾಗಿ ಸಂಘದ ಮೂಲಕ ತಿಳಿಸಿದ್ದಾರೆ.