ಶನಿವಾರಸಂತೆ, ಸೆ. 26: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬ್ಯಾಗ್ ರಹಿತ ದಿನ. ವಿದ್ಯಾರ್ಥಿಗಳು ಖುಷಿ ಮತ್ತು ಲವಲವಿಕೆಯಿಂದ ಕೈಯಲೊಂದಿಷ್ಟು ಬಣ್ಣದ ಕಾಗದ ಮತ್ತೊಂದು ಕತ್ತರಿ ಹಿಡಿದು ಬಂದಿದ್ದರು.
ಸಹಶಿಕ್ಷಕ ಸಿ.ಎಸ್. ಸತೀಸ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಕಲ್ಪನೆಯ ಕಸೂತಿಗಳ ಕೈಚಳಕ ಅಲ್ಲಿ ಅನಾವರಣಗೊಂಡಿತು. ಬಣ್ಣದ ಕಾಗದ, ಕತ್ತರಿ ಹಿಡಿದ ಪುಟ್ಟ ಕೈಗಳಲ್ಲಿ ಸಾಂಚಿ ಎಂಬ ವಿಶಿಷ್ಟ ಕಲೆ ಅರಳಿತ್ತು. ಅಳಿವಿನಂಚಿಗೆ ಬಂದು ಕಣ್ಮರೆಯಾಗುತ್ತಿರುವ ಸಾಂಚಿ ಕಾಗದ ಕತ್ತರಿಸುವ ಕಲೆ. ಪೌರಾಣಿಕ ಕಾಲದಲ್ಲಿ ಶ್ರೀ ಕೃಷ್ಣನಿಗಾಗಿ ಹುಟ್ಟಿಕೊಂಡಿದೆ ಎಂದು ಹೇಳಲಾಗುವ ಈ ಕಲೆಗೆ ದೇವಸ್ಥಾನ ಕಲಾ ಸಾಂಚಿ ಎಂಬ ಹೆಸರೂ ಇದೆ.
ಶಾಲೆಯಲ್ಲಿ ಈ ಕಲೆಯನ್ನು ಮಕ್ಕಳ ಕಲಿಕೆಗೆ ಸೂಕ್ತವಾಗುವಂತೆ ಮಾರ್ಪಾಡು ಮಾಡಿ ಕಲ್ಪಿಸುತ್ತಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳಿಗೆ ರೂಪ ಕೊಟ್ಟು ಚಿಟ್ಟೆ, ತ್ರಿಶೂಲ, ಚೀನಿ ಮಾನವ, ಗಣಪ ಇತ್ಯಾದಿ ಆಕೃತಿಗಳನ್ನು ಮಾಡಿ ಸಂಭ್ರಮಿಸಿದರು.