ಸಿದ್ದಾಪುರ, ಸೆ. 26: ನೆಲ್ಲಿಹುದಿಕೇರಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಕಂದಾಯ ಇಲಾಖೆ ವತಿಯಿಂದ ನೀಡಿರುವ ನೋಟೀಸ್ ಬಗ್ಗೆ ಅಸಮಾಧಾನಗೊಂಡ ಸಂತ್ರಸ್ತರು ಬುಧವಾರದಂದು ಪಂಚಾಯಿತಿ ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ.
ಮನೆ ಕಳೆದುಕೊಂಡ ಸಂತ್ರಸ್ತರು ನೆಲ್ಲಿಹುದಿಕೇರಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದು ಈ ಕುಟುಂಬಗಳಿಗೆ ಮಂಗಳವಾರದಂದು ಕಂದಾಯ ಇಲಾಖೆಯ ವತಿಯಿಂದ ನೋಟೀಸೊಂದನ್ನು ಜಾರಿಗೊಳಿಸ ಲಾಗಿತ್ತು. ನೋಟೀಸ್‍ನಲ್ಲಿ ಉಲ್ಲೇಖಿಸಿರುವಂತೆ ರೂ. 1 ಲಕ್ಷ ಪರಿಹಾರವನ್ನು ನೀಡಲಾಗುವದು ಹಾಗೂ ಹಿಂದೆ ವಾಸ ಮಾಡಿಕೊಂಡಿದ್ದ ಮನೆಗೆ ಅನಧಿಕೃತ ಜಾಗದಲ್ಲಿದ್ದು, ಆ ಜಾಗಕ್ಕೆ ಇನ್ನು ಮುಂದೆ ಯಾವದೇ ಸಂಬಂಧ ಇರುವದಿಲ್ಲ ಎಂದು ತಿಳಿಸಲಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಸಂತ್ರಸ್ತರು ನೋಟೀಸ್ ನೀಡಲು ಬಂದಿದ್ದ ಗ್ರಾಮ ಸಹಾಯಕರಿಂದ ನೋಟೀಸ್ ಪಡೆದುಕೊಳ್ಳದೆ ಆಕ್ಷೇಪ ವ್ಯಕ್ತಪಡಿಸಿದ್ದರು.
ನೋಟೀಸ್ ಜಾರಿ ಮಾಡಿದ ವಿಚಾರದಲ್ಲಿ ಸಂತ್ರಸ್ತರು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದರು. ಅಲ್ಲದೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ನಂತರ ಗ್ರಾಮಲೆಕ್ಕಿಗ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭ ಸಂತ್ರಸ್ತರು ತಾವು ಈಗಾಗಲೇ ತಮ್ಮ ಮನೆಗಳನ್ನು ಸಾಮಗ್ರಿಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದೇವೆ. ಇಲ್ಲಿಗೆ ಆಗಮಿಸಿದ ಮುಖ್ಯಮಂತ್ರಿಗಳು ಸಚಿವರುಗಳು ತಮಗೆ ಶಾಶ್ವತ ಸೂರುಗಳನ್ನು ಒದಗಿಸಿಕೊಡುವ ಬಗ್ಗೆ ಭರವಸೆಯನ್ನು ನೀಡಿದ್ದರು. ಆದರೆ ಇದೀಗ ಏಕಾಏಕಿ ಜಿಲ್ಲಾಡಳಿತ ನೋಟೀಸ್ ಜಾರಿ ಮಾಡಿ ತಮ್ಮನ್ನು ಪರಿಹಾರ ಕೇಂದ್ರದಿಂದ ಬಿಡುಗಡೆಗೊಳಿಸಲು ಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾವು ಶಾಶ್ವತ ಸೂರು ಸಿಗುವವರೆಗೂ ಪರಿಹಾರ ಕೇಂದ್ರವನ್ನು ಬಿಟ್ಟು ತೆರಳುವದಿಲ್ಲ ಎಂದು ಪಟ್ಟು ಹಿಡಿದರು. ತಮಗೆ ಕೇವಲ ಒಂದು ಲಕ್ಷ ಪರಿಹಾರವನ್ನು ನೀಡಿ ಶಾಶ್ವತ ಸೂರು ಒದಗಿಸಿಕೊಡದಿರುವದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. - ವಾಸು