*ಗೋಣಿಕೊಪ್ಪಲು, ಸೆ. 26: ಶ್ರೀ ಕಾವೇರಿ ದಸರಾ ಸಮಿತಿ ಆಚರಿಸುವ 41ನೇ ದಸರಾ ಜನೋತ್ಸವದ ಅಂಗವಾಗಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಕ್ಟೋಬರ್ 4ರಂದು ಮಹಿಳಾ ದಸರಾ ನಡೆಯಲಿದೆ ಎಂದು ಮಹಿಳಾ ದಸರಾದ ಅಧ್ಯಕ್ಷ ನೂರೇರ ರತಿ ಅಚ್ಚಪ್ಪ ತಿಳಿಸಿದ್ದಾರೆ.

ಮಹಿಳೆಯರಿಗಾಗಿ ಅಂದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಹಿಳೆಯರು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 5ರ ತನಕ ವಿವಿಧ ಕಾರ್ಯಕ್ರಮಗಳು ಮಹಿಳೆಯರ ಮನರಂಜಿಸಲು ಸಿದ್ಧತೆಗೊಂಡಿವೆ.

ಮೆಹಂದಿ ಸ್ಪರ್ಧೆ, ಬೆಂಕಿ ಇಲ್ಲದ ಅಡುಗೆ, ಹೂವಿನ ಜೋಡಣೆ, ಜಾನಪದ ನೃತ್ಯ, ಜಾನಪದ ಗೀತೆ, ಕಣ್ಣು ಕಟ್ಟಿ ಸಂಗಾತಿಗೆ ಮೇಕಪ್ ಮಾಡುವುದು, ವಾಲಗತ್ತಾಟ್, ಪೌರಾಣಿಕ ಛದ್ಮವೇಷ, ಪಾಸಿಂಗ್ ದ ಬಾಲ್, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಬೆಲೂನ್ ಒಡೆಯುವದು ರಂಗೋಲಿ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 10ಗಂಟೆಗೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಹಿಳಾ ದಸರಾದ ಅಂಗವಾಗಿ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಆಮಂತ್ರಣ ಪತ್ರ ನೀಡಿ ನಂತರ ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಹಿಳಾ ದಸರಾದ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಅಲ್ಲದೇ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವಂತೆ ಈ ಸಂದರ್ಭ ಕರೆ ನೀಡಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ ರಾಮಕೃಷ್ಣ, ಕಾರ್ಯಾಧಕ್ಷ ಕೆ.ಪಿ. ಬೋಪಣ್ಣ, ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಮಹಿಳಾ ದಸರಾ ಕಾರ್ಯದರ್ಶಿ ಧನಲಕ್ಷ್ಮಿ, ಉಪಾಧ್ಯಕ್ಷೆ ರಾಣಿ ನಾರಾಯಣ, ಕಾರ್ಯಾಧ್ಯಕ್ಷೆ ಕೊಣಿಯಂಡ ಬೋಜಮ್ಮ ಹಾಜರಿದ್ದರು.