ಶ್ರೀಮಂಗಲ, ಸೆ. 26: ಕೊಡಗು-ಕೇರಳ ಗಡಿಭಾಗದ ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳು ಗ್ರಾಮಕ್ಕೆ ನುಗ್ಗಿ ದಿನನಿತ್ಯ ಬೆಳೆಗಳಿಗೆ ನಷ್ಟ ಮಾಡುತ್ತಿದ್ದು, ಕಳೆದ ಹಲವು ದಶಕದಿಂದ ನಿರಂತರವಾಗಿ ಈ ಸಮಸ್ಯೆಯಿಂದ ಈ ವ್ಯಾಪ್ತಿಯ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಅ. 15 ರಂದು ಕುಟ್ಟ ಕೊಡವ ಸಮಾಜದಲ್ಲಿ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಮತ್ತು ಸಾರ್ವಜನಿಕರ ಸಭೆ ನಡೆಸಲು ಕುಟ್ಟ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಎ.ಟಿ. ಲೀಲಾವತಿ ಅವರ ಅಧ್ಯಕ್ಷತೆಯಲ್ಲಿ ಕುಟ್ಟ ಸರ್ಫಿಯಾ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕಾಡಾನೆ ಹಾವಳಿಯ ಬಗ್ಗೆ ಹೆಚ್ಚಿನ ಸಮಯ ಚರ್ಚೆ ನಡೆಯಿತು. ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಸದಸ್ಯ ಹೆಚ್.ವೈ.ರಾಮಕೃಷ್ಣ ಅವರು, ದಿನನಿತ್ಯ ಕಾಡಾನೆ ಹಾವಳಿಯಿಂದ ಈ ವ್ಯಾಪ್ತಿಯ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಸತತ ಎರಡು ವರ್ಷದಿಂದ ಅತಿವೃಷ್ಟಿಗೆ ತುತ್ತಾಗಿ ಈ ವ್ಯಾಪ್ತಿಯಲ್ಲಿ ಕಾಫಿ, ಕರಿಮೆಣಸು, ಅಡಿಕೆ ಫಸಲು ಬಹುತೇಕ ನಾಶವಾಗಿದೆ. ಅಳಿದುಳಿದ ಬೆಳೆಯನ್ನು ಕಾಡಾನೆÉಗಳು ನಾಶ ಮಾಡುತ್ತಿವೆ. ಕಳೆದ ಹಲವು ವರ್ಷದಿಂದ ಕಾಡಾನೆ ಹಾವಳಿ ಬಗ್ಗೆ ಚರ್ಚೆ ಮತ್ತು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ. ಇದಲ್ಲದೆ ಕಂದಕ, ಸೋಲಾರ್ ಬೇಲಿ ಇತ್ಯಾದಿ ಯೋಜನೆ ಗಳು ವಿಫಲವಾಗಿವೆ. ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ನೀಡುವ ಪರಿಹಾರ ಅವಶ್ಯವಿಲ್ಲ. ಶಾಶ್ವತವಾಗಿ ಕಾಡಾನೆಗಳು ನಾಡಿಗೆ ಬಾರದಂತೆ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.

ಧ್ವನಿಗೂಡಿಸಿದ ಗ್ರ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಡಿ.ಸಿ.ಎಫ್. ಹಾಗೂ ಎ.ಸಿ.ಎಫ್. ಅವರೊಂದಿಗೆ ಸಾರ್ವಜನಿಕರು ಸಭೆ ನಡೆಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಶ್ರೀಮಂಗಲ ವಲಯಾರಣ್ಯಾ ಧಿಕಾರಿ ವೀರೇಂದ್ರ ಮರಿಬಸಣ್ಣವರ್ ಮೂಲಕ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಅ. 15ಕ್ಕೆ ಪೂರ್ವಾಹ್ನ 11 ಗಂಟೆಗೆ ಸಭೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರುಗಳಾದ ಕೈಬುಲೀರ ನಕುಲ್, ನಂಜಪ್ಪ ಹಾಗೂ ರಾಜೇಂದ್ರ ಪ್ರಸಾದ್ ಅವರು ಅರಣ್ಯ ಇಲಾಖೆಯು ಅರಣ್ಯ ಹಾಗೂ ಗ್ರಾಮದ ನಡುವೆ ಸರಹದ್ದು ಗುರುತಿಸಲು ಜಿ.ಎಪಿ.ಎಸ್. ಸರ್ವೆ ಕಾರ್ಯ ನಡೆಸಿದ್ದು, ಈ ಸರ್ವೆಯಲ್ಲಿ ಗ್ರಾಮದ ರಸ್ತೆ, ಹಲವು ವಾಸದ ಮನೆ, ಕಾಫಿ ತೋಟಗಳು ಅರಣ್ಯದೊಳಗೆ ಬರುತ್ತಿವೆ. ಇದು ಸರಿಯಲ್ಲ ಎಂದು ಹೇಳಿದರು. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಗಡಿ ಗುರುತಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮಕ್ಕೆ ನುಸುಳುವ ಕಾಡಾನೆ ಹಿಂಡುಗಳಲ್ಲಿ ಹೆಣ್ಣಾನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಅವುಗಳು ಇರುವ ಜಾಗ ಪತ್ತೆ ಹಚ್ಚಲು ಸಹಕಾರವಾಗುವಂತೆ ಮಾಡಲಾಗಿದೆ ಎಂದು ಆರ್.ಎಫ್.ಓ ವೀರೇಂದ್ರ ಅವರು ಮಾಹಿತಿ ನೀಡಿದರು. ಈ ವ್ಯಾಪ್ತಿಯಲ್ಲಿ ಬಹಳಷ್ಟು ಕಾಡಾನೆ ಹಿಂಡು ಇರುವದರಿಂದ ಕೇವಲ ಒಂದು ಆನೆಗೆ ರೇಡಿಯೋ ಕಾಲರ್ ಅಳವಡಿಸಿದರೆ ಸಾಕಾಗುವದಿಲ್ಲ. ಹೆಚ್ಚಿನ ಸಂಖ್ಯೆಯ ಆನೆÉಗಳಿಗೆ ಇದನ್ನು ಅಳವಡಿಸುವಂತೆ ಜಿ.ಪಂ. ಸದಸ್ಯ ಶಿವುಮಾದಪ್ಪ ಸಲಹೆ ನೀಡಿದರು.

ಶ್ರೀಮಂಗಲ ಕಂದಾಯ ಇಲಾಖೆಯ ಲೆಕ್ಕಾಧಿಕಾರಿ ದೇವಯ್ಯ ಅವರು ಸಭೆಗೆ ಮಾಹಿತಿ ನೀಡಿ ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದ ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ 9 ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ಕೋರಿ ಅರ್ಜಿ ಬಂದಿದೆ. ಇದಲ್ಲದೆ ಬೆಳೆ ಹಾನಿಗೆ ಪರಿಹಾರ ಕೋರಿ 528 ಅರ್ಜಿಗಳು ಬಂದಿವೆ. ಕಳೆದ ಸಾಲಿನಲ್ಲಿ ಎರಡು ಮೂರು ಹಂತದಲ್ಲಿ ಪರಿಹಾರ ಹಣ ಅರ್ಜಿದಾರರಿಗೆ ಪಾವತಿ ಯಾಗಿದ್ದು, ಈ ಬಾರಿ ಎಲ್ಲಾ ಅರ್ಜಿಗಳನ್ನು ಸಂಬಂಧಿಸಿದ ತಂತ್ರಾಂಶದಲ್ಲಿ ದಾಖಲಿಸಿದ ನಂತರ ಒಂದೇ ಕಂತಿನಲ್ಲಿ ಪರಿಹಾರ ಪಾವತಿಸುವ ಬಗ್ಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆಂದು ಅವರು ಹೇಳಿದರು.

ವೇದಿಕೆಯಲ್ಲಿ ನೋಡಲ್ ಅಧಿಕಾರಿ ಪಶುಸಂಗೋಪನಾ ಇಲಾಖೆಯ ಡಾ. ಬಿ.ಜಿ. ಗಿರೀಶ್, ತಾ.ಪಂ. ಸದಸ್ಯ ಪಲ್ವಿನ್‍ಪೂಣಚ್ಚ, ಪಿ.ಡಿ.ಓ ಅನಿಲ್‍ಕುಮಾರ್, ಸದಸ್ಯರು ಹಾಜರಿದ್ದರು.