• ಮಡಿಕೇರಿ, ಸೆ. 25: ಮಡಿಕೇರಿಯ ಹೊಸ ಹಾಗೂ ಹಳೆಯ ಖಾಸಗಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೊಡಗು ಬಸ್ ಕಾರ್ಮಿಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

    ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಭರತ್ ಕುಮಾರ್ ಅವರು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರುಗಳು ಸಾರ್ವಜನಿಕರ ತೊಂದರೆಗಳಿಗೆ ಸ್ಪಂದಿಸಿದರೂ, ನಗರಸಭೆ ಯಾವದೇ ಆಸಕ್ತಿ ವಹಿಸುತ್ತಿಲ್ಲ. ಕೊಡಗಿನ ಮೂಲೆ ಮೂಲೆಗಳಿಂದ ಜಿಲ್ಲೆಯ ಕೇಂದ್ರ ಬಿಂದು ಎನಿಸಿರುವ ಮಡಿಕೇರಿಗೆ ಎಲ್ಲಾ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಖಾಸಗಿ ಬಸ್‍ನಲ್ಲಿ ಬಂದು ಹೋಗುತ್ತಾರೆ. ಪ್ರಯಾಣಿಕರಿಗೆ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಒಂದು ಬಸ್ ತಂಗುದಾಣ ಮತ್ತು ಶೌಚಾಲಯದ ಅವಶ್ಯಕತೆ ಇದೆ. ನಾಗರಿಕರ ಕಷ್ಟಗಳಿಗೆ ಸ್ಪಂದಿಸಿ ಮಡಿಕೇರಿಯ ಮುಳಿಯ ಅಂಡ್ ಸನ್ಸ್ ಮಾಲೀಕರು ಮುಂದೆ ಬಂದಿರುತ್ತಾರೆ.

    ಆದರೆ ನಗರಸಭೆ ಇದಕ್ಕೆ ಅಡ್ಡಗಾಲು ಹಾಕುವದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಕೆಲವು ದಿನಕಳೆದರೆ ನಗರಸಭೆಯ ಚುನಾವಣೆ ಆಗಲಿದೆ. ಅದರ ನಂತರ ಯಾವ ಒಂದು ಒಳ್ಳೆಯ ಕೆಲಸ ಆಗುವದಿಲ್ಲ. ಕೂಡಲೇ ಜಿಲ್ಲಾಧಿಕಾರಿಯವರು ಗಮನ ಹರಿಸಿ ಬಸ್ ನಿಲ್ದಾಣದಲ್ಲಿ ಒಂದು ತಂಗುದಾಣ ನಿರ್ಮಿಸಲು ಅನುಮತಿ ಕೊಡಬೇಕಾಗಿ ಮನವಿ ಮಾಡಿದ್ದಾರೆ.

    ಈ ಬಗ್ಗೆ ಕೊಡಗಿನ ಎಲ್ಲ ಜನಪ್ರತಿನಿಧಿಗಳಿಗೆ, ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಕೊಡಗಿನ ಕನ್ನಡ ದಿನಪತ್ರಿಕೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸಿ ಪತ್ರಿಕೆಯಲ್ಲಿ ಹಲವು ಸಮಯಗಳಿಂದ ಧ್ವನಿ ಎತ್ತಿದರೂ ನಗರಸಭೆಯ ಆಯುಕ್ತರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.