ಶ್ರೀಮಂಗಲ, ಸೆ. 25: ಸಾಮಾಜಿಕ ಜಾಲತಾಣದಲ್ಲಿ ಅರೆಭಾಷೆ ಗೌಡ ಜನಾಂಗದ ಕೆಲವು ಯುವ ಸಮುದಾಯ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಂದ ಕೊಡವ ಜನಾಂಗದ ಸಾಂಸ್ಕøತಿಕ ವಿಚಾರ ಮತ್ತು ಕೊಡವ ಜನಾಂಗದ ಮಹಿಳೆಯರು ಮತ್ತು ಯುವತಿಯರ ಬಗ್ಗೆ ತೀವ್ರ ತರಹದ ಅವಹೇಳನಕಾರಿಯಾದ ಪೋಸ್ಟ್ಗಳನ್ನು ಹಾಕುತ್ತಿರುವವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ ಒತ್ತಾಯಿಸಿದ್ದಾರೆ.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬುಧವಾರ ನಡೆದ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ಅವರು ಈ ಬಗ್ಗೆ ಪ್ರಸ್ತಾಪಿಸಿದರು. ಕೊಡವ ಜನಾಂಗವನ್ನು ಅವಹೇಳನ ಮಾಡಿರುವ ಕಿಡಿಗೇÀಡಿಗಳನ್ನು ಮುಂದಿನ 15 ದಿನದೊಳಗೆ ಬಂಧಿಸಿ ಅವರ ಮೇಲೆ ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಚೇರಂಬಾಣೆ ಕೊಡವ ಸಮಾಜ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದು, ಚೇರಂಬಾಣೆ ಕೊಡವ ಸಮಾಜಕ್ಕೆ ಪೊನ್ನಂಪೇಟೆ ಕೊಡವ ಸಮಾಜವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಕೊಡವ ಜನಾಂಗದ ಮಹಿಳೆಯರು ಮತ್ತು ಯುವತಿಯರನ್ನೇ ಸಂಘಟಿಸಿ ಹೋರಾಟ ನಡೆಸಲಾಗುವದು ಎಂದು ಅವರು ಎಚ್ಚರಿಸಿದರು. ಕೆಲವು ಕಿಡಿಗೇಡಿಗಳು ಜನಾಂಗೀಯ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದ್ದು, ಇದು ಯಾವದೇ ಕಾರಣಕ್ಕೆ ಆಕಸ್ಮಿಕವಾಗಿ ಅಚಾತುರ್ಯದಿಂದ ಸಾಮಾಜಿಕ ಜಾಲÀತಾಣದಲ್ಲಿ ನಿಂದನೆ ಮಾಡಿರುವದಲ್ಲ. ಹಲವು ಸಮಯದಿಂದ ಉದ್ದೇಶಪೂರ್ವಕ ವಾಗಿಯೇ ನಿಂದಿಸುತ್ತಿರುವದರಿಂದ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯದಿಂದ ಕೊಡವ-ಅರೆಭಾಷೆ ಜನಾಂಗದ ನಡುವೆ ಸಾಮರಸ್ಯ ಕದಡುವಂತಾಗಬಾರದು. ಈ ಕೃತ್ಯದಿಂದ ಜನಾಂಗೀಯ ದ್ವೇಷಕ್ಕೆ ದಾರಿಯಾಗಬಾರದು.ಈ ಪ್ರಕರಣದಲ್ಲಿ ಅವಹೇಳನ ಮಾಡಿರುವ ಕಿಡಿಗೇಡಿಗಳನ್ನು ರಕ್ಷಿಸುವ ಅಥವಾ ಅವರನ್ನು ಮುಂದಿಟ್ಟುಕೊಂಡು ಉಭಯ ಜನಾಂಗದಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವಂತಹ ವಿಚಾರ ಬರದಂತೆ ಉಭಯ ಸಮಾಜದ ಮುಖಂಡರು ಗಮನಹರಿಸ ಬೇಕಾಗಿರುವದು ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಪಿ. ಬೋಪಣ್ಣ, ಗೌ.ಕಾರ್ಯದರ್ಶಿ ಪೊನ್ನಿಮಾಡ ಎಸ್. ಸುರೇಶ್, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಆರ್. ಶಾರದ, ಖಜಾಂಚಿ ಮೂಕಳೇರ ಪಿ. ಲಕ್ಷ್ಮಣ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಮೂಕಳಮಾಡ ಅರಸುನಂಜಪ್ಪ, ಅಡ್ಡಂಡ ಸುನೀಲ್ ಸೋಮಯ್ಯ, ಚೆಪ್ಪುಡಿರ ರಾಕೇಶ್ದೇವಯ್ಯ, ಮಂಡಚಂಡ ದಿನೇಶ್ಚಿಟ್ಟಿಯಪ್ಪ, ಚೆಪ್ಪುಡಿರ ರೂಪಉತ್ತಪ್ಪ, ಚೊಟ್ಟೆಕಾಳಪಂಡ ಆಶಾಪ್ರಕಾಶ್ ಹಾಜರಿದ್ದರು.