ಮಡಿಕೇರಿ, ಸೆ. 25: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಜಾಗ ಮಂಜೂರಾತಿ ಸಂಬಂಧ ಗೊಂದಲ ಕುರಿತು ಖುದ್ದು ವಿವರಣೆ ಸಂಗ್ರಹಿಸಿ ಮುಂದಿನ 24 ಗಂಟೆಯೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಉಪ ವಿಭಾಗಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಗೊಂದಲಕ್ಕೆ ಕಾರಣ ಕಂಡು ಹಿಡಿಯುವಂತೆ ನಿರ್ದೇಶಿಸಿದ್ದಾರೆ.

2019-20ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದ ಕುಟುಂಬಗಳ ಪೈಕಿ ಯಾವದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಸಂತ್ರಸ್ತರಿಂದ ವಾಸ ಸ್ಥಳದ ಬಗ್ಗೆ ಹಕ್ಕು ಸ್ಥಾಪಿಸಲು ಮತ್ತು ಸಕ್ರಮೀಕರಣಗೊಳಿಸಲು ಯಾವದೇ ಪ್ರಯತ್ನ ಮತ್ತು ಹಕ್ಕು ಅಥವಾ ವ್ಯಾಜ್ಯ ಚಲಾಯಿಸುವದಿಲ್ಲ ಎಂದು ನೆಲ್ಲಿಹುದಿಕೇರಿ ನಿರಾಶ್ರಿತ ಕೇಂದ್ರದಲ್ಲಿ ಕಂದಾಯ ಇಲಾಖೆಯಿಂದ ಪ್ರಮಾಣ ಪತ್ರ ಪಡೆದು ಸರಕಾರದಿಂದ ರೂ. 1 ಲಕ್ಷ ಪರಿಹಾರವನ್ನು ಪಾವತಿಸಲು ಕ್ರಮ ವಹಿಸಲಾಗುತ್ತಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ವಾಸಕ್ಕೆ ಯೋಗ್ಯವಾಗಿರುವ ಜಾಗಗಳಲ್ಲಿ ಅನಧಿಕೃತವಾಗಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದು, ಪ್ರಸ್ತುತ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಂದ ಮಾತ್ರ ಸರಕಾರದ ಆದೇಶದಂತೆ ಈ ರೀತಿಯ ಪ್ರಮಾಣ ಪತ್ರವನ್ನು ಪಡೆಯಲಾಗುತ್ತಿದೆ. ವಾಸಕ್ಕೆ ಯೋಗ್ಯವಾಗಿರದ ಜಾಗಗಳಲ್ಲಿ ಅನಧಿಕೃತವಾಗಿ ವಾಸವಿರುವವರಿಗೆ ಇದು ಅನ್ವಯಿಸುವದಿಲ್ಲ ಎಂದು ಸಮಜಾಯಿಷಿಕೆ ನೀಡಿದ್ದಾರೆ.

ಅಲ್ಲದೆ ವಾಸಕ್ಕೆ ಯೋಗ್ಯವಾಗಿರದ ನದಿ ತೀರದ ಪ್ರದೇಶಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಪ್ರಸ್ತುತ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ವಾಸಕ್ಕೆ ಯೋಗ್ಯವಾದ ಸ್ಥಳಗಳಿಗೆ ಸ್ಥಳಾಂತರಿಸುವ ಬಗ್ಗೆ ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ನೆನಪಿಸಿದರು.

ಇಷ್ಟೆಲ್ಲಾ ಕ್ರಮಕೈಗೊಂಡಿದ್ದರೂ ಸಹ ಸಾರ್ವಜನಿಕರಲ್ಲಿ ಈ ಬಗ್ಗೆ ಗೊಂದಲ ಉಂಟಾಗಲು ಕಾರಣವೇನು ಎಂಬ ಬಗ್ಗೆ 24 ಗಂಟೆಯೊಳಗೆ ವಿವರಣೆ ನೀಡಲು ಸಂಬಂಧಪಟ್ಟ ಕಂದಾಯ ಪರಿವೀಕ್ಷಕರು ಮತ್ತು ಗ್ರಾಮ ಲೆಕ್ಕಿಗರಿಗೆ ನೋಟೀಸು ಜಾರಿ ಮಾಡಲಾಗಿದೆ ಹಾಗೂ ಸಾರ್ವಜನಿಕರಲ್ಲಿ ಈ ರೀತಿಯ ಗೊಂದಲ ಉಂಟಾಗಲು ಕಾರಣವೇನು? ಎಂಬ ಬಗ್ಗೆ ಸಂಬಂಧಿಸಿದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರು ಯಾವದೇ ಆತಂಕಕ್ಕೆ ಒಳಗಾಗಬಾರದೆಂದು ಜಿಲ್ಲಾಡಳಿತ ಮನವಿ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಕಳಕಳಿ ವ್ಯಕ್ತಪಡಿಸಿದ್ದಾರೆ.