ಮಡಿಕೇರಿ, ಸೆ. 24: ಮಕ್ಕಳ ಆಸಕ್ತಿಯ ಕ್ಷೇತ್ರದಲ್ಲಿ ಮಾತ್ರ ಅವರ ಸಾಧನೆಯನ್ನು ನಿರೀಕ್ಷಿಸಬೇಕೆಂದು ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಓಂಕಾರ ಸದನದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆ ಏರ್ಪಡಿಸಿದ್ದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಮಾನಸಿಕ ಒತ್ತಡ ಹೇರಬಾರದು; ಮಗುವಿನ ಆಸಕ್ತಿಯ ಕ್ಷೇತ್ರವನ್ನು ಗುರುತಿಸದೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧಿಸಬೇಕು ಎಂದು ಪೋಷಕರು ಬಯಸಿದ್ದೇ ಆದಲ್ಲಿ ಮಗು ತಾನು ಅಪ್ರಯೋಜಕ ಎನ್ನುವ ನಿಲುವು ತಾಳುವ ಸಾಧ್ಯತೆ ಇದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂ ಡಿದ್ದ ಮದೆನಾಡಿನ ನಿವೃತ್ತ ಮುಖ್ಯ ಶಿಕ್ಷಕ ಬಿ.ಎ. ಜೋಯಪ್ಪ ಮಾತನಾಡಿ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಪೋಷಕರಿಗೆ ತಿಳಿಯದಿದ್ದರೂ ಶಿಕ್ಷಕರು ಅದನ್ನು ಗುರುತಿಸುತ್ತಾರೆ ಎಂದರು. ಉದ್ಯಮಿ ಜಯಂತ ಪೂಜಾರಿ ಶುಭ ಕೋರಿದರು. ಸಮರ್ಥ ಕನ್ನಡಿಗರು ವಿಶ್ವ ಘಟಕದ ಪ್ರಧಾನ ಸಂಚಾಲಕ ಬಸವರಾಜ್ ಎಸ್. ಕಲ್ಲುಸಕ್ಕರೆ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಕೊಡಗು ಜಿಲ್ಲಾ ಸಂಚಾಲಕಿ ಜಯಲಕ್ಷ್ಮಿ ಕೆ. ಮಾತನಾಡಿ ಅಮ್ಮನ ಎದೆ ಹಾಲಿನ ಮಹತ್ವ ಮಾತೃ ಭಾಷೆಗಿದೆ. ಅಂತಹ ತಾಯ್ನುಡಿಯ ಬೆಳವಣಿಗೆಗೆ ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಕೊಡವ ಸಮಾಜ ಹಾಗೂ ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ, ಕೊಡಗು ಜಾನಪದ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ವಲಯಾಧಿಕಾರಿ ದಾಮೋದರ್, ಉದ್ಯಮಿ ಶಂಕರ ಪೂಜಾರಿ, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ವೇದಿಕೆಯಲ್ಲಿದ್ದರು. ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ‘ಸಮರ್ಥ ಕನ್ನಡಿಗರು’ ಎಂಬ ಗೌರವಾಭಿನಂದನೆ ಸಲ್ಲಿಸಲಾಯಿತು.
ಬಿಟಿವಿ ವರದಿಗಾರ ಗೋಪಾಲ್ ಸೋಮಯ್ಯ (ಮಾಧ್ಯಮ ಕ್ಷೇತ್ರ), ಗಿರೀಶ್ ಕಿಗ್ಗಾಲು (ಸಾಹಿತ್ಯ ಕ್ಷೇತ್ರ), ಮಹೇಶ ಬಿ.ಆರ್. (ಶಿಕ್ಷಣ ಕ್ಷೇತ್ರ), ದಿಲೀಶ್ ನಾಯರ್, ಅನೀಫ ಸಿ.ಎಂ, ಅಬ್ದುಲ್ ರಶೀದ್ (ಸಾಮಾಜಿಕ ಕಳಕಳಿ) ಇವರು ಗೌರವಾಭಿನಂದನೆ ಸ್ವೀಕರಿಸಿದರು. ಛದ್ಮವೇಷ, ಕತೆ, ಚಿತ್ರಕಲೆ, ಪ್ರಬಂಧ, ಸಮೂಹ ನೃತ್ಯ, ಸಮೂಹ ಗಾಯನ ಇತ್ಯಾದಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶ್ರೇಣಿ ಕುಶಾಲನಗರ, ಜೆನಿಫರ್ ವೀರಾಜಪೇಟೆ, ಪದ್ಮ ತೀರ್ಪು ಗಾರರಾಗಿ ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ 19 ಕವಿಗಳು ಭಾಗವಹಿಸಿದ್ದರು. ಶಿಕ್ಷಕಿ ಹಾಗೂ ಕತೆಗಾರ್ತಿ ಸುನೀತಾ ಲೋಕೇಶ್ ಅಧÀ್ಯಕ್ಷತೆ ವಹಿಸಿ ಕವನಗಳ ವಿಮರ್ಷೆ ಮಾಡಿದರು. ಸಮರ್ಥ ಕನ್ನಡಿಗರು ಸಂಚಾಲಕ ಕೃಷ್ಣ ಕೆ.ಎಸ್. ನಿರೂಪಿಸಿದರು. ಲವೀನ ಲೋಪೆಜ್ ಸ್ವಾಗತಿಸಿ, ಗಣೇಶ್ ಮಾಗೋಡು ವಂದಿಸಿದರು. ಹಾಶಿನಿ ಸಿಂಗ್, ದೀಕ್ಷಿತ, ಶ್ರಾವ್ಯ, ಅನೂಷ ಸ್ಪರ್ಧೆಗಳನ್ನು ನಡೆಸಿಕೊಟ್ಟರು.