ಕೂಡಿಗೆ, ಸೆ. 24: ಅರಣ್ಯ, ಜೀವಿ-ವೈವಿಧ್ಯ, ವನ್ಯಜೀವಿಗಳ ಸಂರಕ್ಷಣೆಯೊಂದಿಗೆ ಸುಸ್ಥಿರ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜೆ. ಗೋವರ್ಧನ್ಸಿಂಗ್ ಹೇಳಿದರು.
ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ, ರಾಷ್ಟ್ರೀಯ ಹಸಿರು ಪಡೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕೊಡಗು ಜಿಲ್ಲಾ ಸಮಿತಿ ಹಾಗೂ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಇಕೋ-ಕ್ಲಬ್ ಶಾಲೆಗಳ ಶಿಕ್ಷಕರಿಗೆ ವಿಪ್ರೋ-ಅರ್ಥಿಯನ್ ಸುಸ್ಥಿರÀ ಪರಿಸರ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪರಿಸರ ಸಂರಕ್ಷಣಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರಕ್ಕೆ ಯಾವದೇ ಧಕ್ಕೆಯನ್ನುಂಟು ಮಾಡದೆ, ಪ್ರಕೃತಿಯನ್ನು ಸಂರಕ್ಷಿಸುವ ಮೂಲಕ ಜೀವಿ-ವೈವಿಧ್ಯ ಸಂರಕ್ಷಿಸಬೇಕು ಎಂದರು.
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ ಮಾತನಾಡಿ, ಪೂರ್ವಿಕರು ಉಳಿಸಿ ಬೆಳೆಸಿಕೊಂಡು ಬಂದಿರುವ ಪರಿಸರವನ್ನು ಮುಂದಿನ ಪೀಳಿಗೆಗೆ ಯಥಾವತ್ತಾಗಿ ವರ್ಗಾಯಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಕಾರ್ಯಕ್ರಮದ ಯೋಜನಾಧಿಕಾರಿ ಎಸ್.ರವಿಶಂಕರ್ ಅವರು ವಿಪ್ರೋ-ಅರ್ಥಿಯನ್ ಸುಸ್ಥಿರ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಯಟ್ನ ಪ್ರಬಾರ ಪ್ರಾಂಶುಪಾಲರಾದ ಮಲ್ಲೇಸ್ವಾಮಿ ವಹಿಸಿದ್ದರು. ವೀರಾಜಪೇಟೆಯ ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಅವರು ಜೀವಿ-ವೈವಿದ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಡಯಟ್ ಉಪನ್ಯಾಸಕ ಎಂ. ಕೃಷ್ಣಪ್ಪ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಮಾಜಿ ಉಪಾಧ್ಯಕ್ಷ ಡಿ. ಕೃಷ್ಣಚೈತನ್ಯ ಇದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಟಿ.ಬಿ. ಮಂಜುನಾಥ್, ಎನ್.ಕೆ. ಮಾಲಾದೇವಿ ನಿರ್ವಹಿಸಿದರು. ತರಬೇತಿಯಲ್ಲಿ ಸಿಆರ್ಪಿಗಳು, ಇಕೋ ಕ್ಲಬ್ನ ಶಿಕ್ಷಕರು ಪಾಲ್ಗೊಂಡಿದ್ದರು.