ಮಡಿಕೇರಿ, ಸೆ. 24: ಪ್ರಸ್ತುತ ವರ್ಷ ಸುರಿದ ಮಹಾಮಳೆಯಿಂದ ಮನೆಗಳನ್ನು ಕಳೆದುಕೊಂಡ ಸುಮಾರು 15 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ಕೊಡಗು ಜಿಲ್ಲಾ ಸಮಸ್ತ ಜಂಇಯ್ಯತ್ತುಲ್ ಉಲಮಾ ಮುಂದಾಗಿದ್ದು, ತಾ. 25 ರಂದು (ಇಂದು) ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಾಗುವದು.

ಕಳೆದ ವರ್ಷ ಸಂತ್ರಸ್ತರಿಗೆ ಆಶ್ರಯ ನೀಡಿ, ನಿಸ್ವಾರ್ಥ ಸೇವೆ ಸಲ್ಲಿಸಿ ‘ಚಿಸ್ತಿ ಇಂಡಿಯಾ’ ಪ್ರಶಸ್ತಿಗೆ ಭಾಜನರಾದ ಸಿ.ಎಂ. ಹಮೀದ್ ಮೌಲವಿ ಸುಂಟಿಕೊಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ಮನೆಗಳ ನಿರ್ಮಾಣದ ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ.

ಸಮಸ್ತ ಜಂಇಯ್ಯತ್ತುಲ್ ಉಲಮಾದ ‘ಸಮಸ್ತ ವಸತಿ ನಿರ್ಮಾಣ ಪದ್ಧತಿ ಯೋಜನೆ’ಯಡಿ ತಲಾ 6 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಬೆಳಗ್ಗೆ 10 ಗಂಟೆಗೆ ಎಮ್ಮೆಮಾಡುವಿನಲ್ಲಿ ಶಿಲಾನ್ಯಾಸ ನಡೆಯಲಿದೆ. ದಕ್ಷಿಣ ಭಾರತದ ಮುಸಲ್ಮಾನರÀ ಅಧಿಕೃತ ಸಂಘಟನೆ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷರು ಹಾಗೂ ಪ್ರವಾದಿ ಮೊಹಮ್ಮದ್ ಮುಸ್ತಫ ಅವರ ಸಂತತಿಯವರಾದ ಸೈಯ್ಯದ್ ಮುಹಮ್ಮದ್ ಜಫ್ರಿ ಮುತ್ತುಕೋಯ ತಂಞಳ್ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಸಿ.ಎಂ. ಹಮೀದ್ ಮೌಲವಿ ತಿಳಿಸಿದ್ದಾರೆ.