ಕುಶಾಲನಗರ, ಸೆ. 24: ಬೆಂಗಳೂರಿನ ರೋಟರಿ ಸಂಸ್ಥೆ ವತಿಯಿಂದ ಕುಶಾಲನಗರದ ಜಿಎಂಪಿ ಶಾಲೆಯಲ್ಲಿ ರೂ. 1.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕುಡಿವ ನೀರಿನ ಶುದ್ದೀಕರಣ ಘಟಕಕ್ಕೆ ಚಾಲನೆ ನೀಡಲಾಯಿತು. ಬೆಂಗಳೂರಿನ ನೈರುತ್ಯ ರೋಟರಿ ಸಂಸ್ಥೆ ಅಧ್ಯಕ್ಷ ನಂಜರಾಜು ಅರಸ್ ನೂತನ ಘಟಕವನ್ನು ಉದ್ಘಾಟಿಸಿದರು.
ಅತಿವೃಷ್ಠಿಯಿಂದ ಹಾನಿ ಗೊಳಗಾಗಿದ್ದ ಶಾಲೆಯ ಎರಡು ಕೊಠಡಿಗಳನ್ನು ರೋಟರಿ ವತಿಯಿಂದ ದುರಸ್ತಿಗೊಳಿಸಿ ವಿದ್ಯಾರ್ಥಿಗಳ ಬಳಕೆಗೆ ಒದಗಿಸಲಾಯಿತು.
ರೋಟರಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಂಜರಾಜು ಅರಸ್, ನೀರಿನ ಮೂಲಕ ರೋಗಗಳು ಹಬ್ಬುವ ಸಾಧ್ಯತೆಗಳು ಅಧಿಕವಾಗಿದ್ದು, ಶೇ. 90 ರಷ್ಟು ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಶುದ್ಧ ನೀರಿನಲ್ಲಿ ಅಡಗಿದೆ. ಪ್ರತಿಯೊಬ್ಬರೂ ಕೂಡ ನೀರಿನ ಸಂರಕ್ಷಣೆಗೆ ಮಹತ್ವ ನೀಡಬೇಕಿದೆ ಎಂದು ಹೇಳಿದರು.
3181 ರೋಟರಿ ಜೋನಲ್ ಕಾರ್ಯದರ್ಶಿ ಎಚ್.ಟಿ. ಅನಿಲ್ ಮಾತನಾಡಿ, ಭಾರತ ತಾಂತ್ರಿಕವಾಗಿ ವಿಶ್ವಮಟ್ಟದ ಸಾಧನೆ ತೋರುತ್ತಿದ್ದರೂ ದೇಶದಲ್ಲಿ ಶುದ್ಧ ಕುಡಿವ ನೀರಿಗೆ ಕೊರತೆ ಎದುರಾಗುತ್ತಲೇ ಇದೆ. ನೀರನ್ನು ಪೋಲು ಮಾಡದೆ ಮುಂದಿನ ತಲೆಮಾರಿಗೆ ಸಂರಕ್ಷಿಸುವ ಜವಾಬ್ದಾರಿ ಇಂದಿನ ಯುವಪೀಳಿಗೆ ಮೇಲಿನ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮ ಸಂಯೋಜಕ, ರೋಟರಿ ನಿಕಟಪೂರ್ವ ಅಧ್ಯಕ್ಷ ಎಸ್.ಕೆ. ಸತೀಶ್ ಪ್ರಾಸ್ತಾವಿಕ ನುಡಿಗಳಾಡಿದರು. ಶತಮಾನಗಳ ಇತಿಹಾಸ ಹೊಂದಿರುವ ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪಟ್ಟಣದ ಜನತೆಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹಲವು ಮಹಾನ್ ಸಾಧಕರು, ಗಣ್ಯರನ್ನು ಕೊಡುಗೆಯಾಗಿ ನೀಡಿರುವ ಶಾಲೆಯ ಋಣ ತೀರಿಸುವದು ಕರ್ತವ್ಯವಾಗಿದೆ ಎಂದರು.
ಕುಶಾಲನಗರ ರೋಟರಿ ಅಧ್ಯಕ್ಷ ಎಂ.ಡಿ. ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ನಾಗೇಶ್, ರೋಟರಿ ಡಿಆರ್‍ಎಫ್ ಮುಖ್ಯಸ್ಥ ಭಗವಾನ್, ಕುಶಾಲನಗರ ಪಪಂ ಸದಸ್ಯೆ ರೂಪಾ ಉಮಾಶಂಕರ್, ರೋಟರಿ ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ, ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಪ್ರಮುಖರಾದ ಕ್ರಿಜ್ವಲ್ ಕೋಟ್ಸ್ ಉಮಾಶಂಕರ್, ಕೆ.ಪಿ. ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕಿ ರಾಣಿ, ಶಿಕ್ಷಕ ವೃಂದ, ರೋಟರಿ ಪದಾಧಿಕಾರಿಗಳು ಇದ್ದರು.