ಮೈಸೂರು, ಸೆ. 24: ಕೊಡವ ರಂಗಭೂಮಿಗೆ ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚ ಅಡಿಪಾಯ ಹಾಕಿದರೆ, ಅಡ್ಡಂಡ ಕಾರ್ಯಪ್ಪ ಇದೀಗ ಆ ಅಡಿಪಾಯದಲ್ಲಿ ಸುಂದರ ಸೌಧ ನಿರ್ಮಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಹಳೆ ಬೇರು ಹೊಸ ಚಿಗುರು ಕೂಡಿದಂತೆ ಇದೆ ಎಂದು ಸಂಸ್ಕøತಿ ಚಿಂತಕ ಡಾ. ಆದೇಂಗಡ ಕುಟ್ಟಪ್ಪ ಹೇಳಿದರು.

ಮೈಸೂರಿನ ರಾಮಕೃಷ್ಣ ನಗರ ದಲ್ಲಿರುವ ನಟನ ರಂಗಮಂದಿರಲ್ಲಿ ತಾ. 21 ರಂದು ಕೇಂದ್ರ ಸಾಹಿತ್ಯ ಅಕಾಡೆಮಿ, ನಟನ ರಂಗಶಾಲೆ, ರಂಗಭೂಮಿ ಪ್ರತಿಷ್ಠಾನ ಕೊಡಗು ಸಂಯುಕ್ತ ಆಶ್ರಯದಲ್ಲಿ ಅಪ್ಪಚ್ಚ ಕವಿಯ 151ನೇ ಜಯಂತಿಯ ಅಂಗವಾಗಿ ಆಯೋಜಿಸಿದ ‘ಕೊಡವ ತಕ್ಕ್ - ಸಾಹಿತ್ಯ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹರದಾಸ ಅಪ್ಪಚ್ಚ ಕವಿ ತಮ್ಮ ಜೀವನವನ್ನು ಪೂರ್ಣವಾಗಿ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಅವರು ಬರೆದ 4 ನಾಟಕಗಳು ಜನಮನ ಗೆದ್ದಿವೆ. ಇದೀಗ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ಅಡ್ಡಂಡ ಕಾರ್ಯಪ್ಪ ನವರು ಪುಸ್ತಕ ಬರೆದಿರುವದು ಶ್ಲಾಘನೀಯ. ಬೆರಳೆಣಿಕೆಯ ಕೊಡವ ಬರಹಗಾರರಲ್ಲಿ ಅವರು ಪ್ರಮುಖ ರಾಗಿದ್ದು, ಮುಂದಿನ ದಿನಗಳಲ್ಲಿ ಬರಹಗಾರರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು. ಇದೇ ವೇಳೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಹರದಾಸ ಅಪ್ಪಚ್ಚಕವಿ’ ಕೃತಿಯನ್ನು ಬಿಡುಗಡೆ ಮಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಲಿಪಿ ಇರುವ ಕನ್ನಡ ಭಾಷೆಯನ್ನೇ ಉಳಿಸಿಕೊಳ್ಳಲು ಹೋರಾಡ ಬೇಕಾದ ಪರಿಸ್ಥಿತಿ ಎದುರಾಗಿದ್ದು, ಲಿಪಿಯೇ ಇಲ್ಲದ ಭಾಷೆಯನ್ನು ಬೆಳೆಸಿದ ಕೀರ್ತಿ ಅಪ್ಪಚ್ಚುಕವಿಗೆ ಸಲ್ಲುತ್ತದೆ ಎಂದರು. ಅದಕ್ಕಾಗಿಯೇ ಅವರ ಹುಟ್ಟು ದಿನವನ್ನು ‘ ಕೊಡವ ತಕ್ಕ್ - ಸಾಹಿತ್ಯ ದಿನ’ ಎಂದು ಆಚರಿಸುತ್ತಿದ್ದೇವೆ ಎಂದರು. ಕೊಡವ ಭಾಷೆಗೆ ಒಂದು ಇತಿಹಾಸವೇ ಇದೆ. ಭಾರತದ ಮೊಟ್ಟ ಮೊದಲ ಲಿಖಿತ ಜಾನಪದ ಗ್ರಂಥ ‘ಪಟ್ಟೋಲೆ ಪಳಮೆ’ ಈ ಕೀರ್ತಿ ಈ ಭಾಷೆಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭರಣಿ ಆರ್ಟ್ ಗ್ಯಾಲರಿಯ ನಿರ್ದೇಶಕ ನೆಲ್ಲಮಕ್ಕಡ ಕಾವೇರಪ್ಪ ಮಾತನಾಡಿ, ಕನ್ನಡ ನಾಡು ಹರದಾಸರನ್ನು ಮರೆಯುವಂತಿಲ್ಲ. ಕನ್ನಡ ಭಾಷೆಯ ಬೆಳವಣಿಗೆಗೆ ಕೊಡವ ಬರವಣಿಗೆಯ ಮೂಲಕ ಅವರು ಶ್ರಮಿಸಿದ್ದಾರೆ. ಅವರ ಕೊಡುಗೆ ಸ್ಮರಣೀಯ. ಕೊಡವ ಭಾಷೆಯಲ್ಲಿ ಛಂದೋಬದ್ಧ ಕಾವ್ಯ ರಚನೆ ಮಾಡಿ, ನಾಟಕಗಳನ್ನು ಬರೆದು, ಪ್ರದರ್ಶನ ನೀಡಿ ಬ್ರಿಟೀಷರ ಕಾಲದಲ್ಲಿ ಮಾಡಿದ ಸಾಧನೆ ಸಣ್ಣ ವಿಚಾರವಲ್ಲ. ಅಪ್ಪಚ್ಚ ಕವಿ ನಿಜವಾಗಿಯೂ ರಾಷ್ಟ್ರಮಟ್ಟದಲ್ಲಿ ಸಲ್ಲಬೇಕಾದ ಕವಿ ಎಂದರು. ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಮಂಡ್ಯ ರಮೇಶ್ ಮಾತನಾಡಿ, ಕೊಡಗಿಗೆ ರಂಗಭೂಮಿಯ ಅಪೂರ್ವ ಕಾಣಿಕೆ ಕಾರ್ಯಪ್ಪ ಅನಿತಾ ದಂಪತಿಗಳು. ಸಾಹಿತ್ಯ, ರಂಗ ಭೂಮಿಯ ಬರಡಾದ ಆ ನಾಡಿನಲ್ಲಿ ನಿರಂತರ ಚಟುವಟಿಕೆಯಿಂದ ಕನ್ನಡ ಮತ್ತು ಕೊಡವ ರಂಗಭೂಮಿಯ ಬಾಂಧವ್ಯ ಬೆಸೆದಿದ್ದಾರೆ. ಇದು ಕಳೆದ 40 ವರ್ಷಗಳ ನಿರಂತರ ಸಾಧನೆಯ ಫಲ ಎಂದರು. ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಅಪ್ಪಚ್ಚಕವಿಯ ಅಧ್ಯಯನ ಪೀಠವನ್ನು ಮೈಸೂರು ವಿದ್ಯಾನಿಲಯದಲ್ಲಿ ಸ್ಥಾಪನೆ ಮಾಡಬೇಕು ಮತ್ತು ಕವಿಯ ಜಯಂತಿಯನ್ನು ಸರಕಾರದ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಆಚರಿಸಬೇಕು ಎಂಬ ನಿರ್ಣಯವನ್ನು ಸಮಾರಂಭದಲ್ಲಿ ಕೈಗೊಳ್ಳಲಾಯಿತು.

ಸಮಾರಂಭದ ನಂತರ ರಂಗಭೂಮಿ ಪ್ರತಿಷ್ಠಾನ ತಂಡದ ‘ಬದ್‍ಕ್’ ಕೊಡವ ನಾಟಕ ಪ್ರದರ್ಶನ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಫಲವಾಯಿತು. ಕಲಾವಿದೆ ಅನಿತಾ ಕಾರ್ಯಪ್ಪ, ಓಡಿಯಂಡ ಗಣೇಶ್, ಕಟ್ಟೇರ ನಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.