ಮಡಿಕೇರಿ, ಸೆ. 24: ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿ ವತಿಯಿಂದ ನಟ ಡಾ. ವಿಷ್ಣುವರ್ಧನ್ ಅವರ 69ನೇ ಹುಟ್ಟು ಹಬ್ಬವನ್ನು ನಗರದ ಬಾಲಭವನ ಸಭಾಂಗಣದಲ್ಲಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ರಫೀಕ್, ಡಾ. ವಿಷ್ಣುವರ್ಧನ್ ಅವರ ಚಿತ್ರ ಬದುಕು ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ವಿವರಿಸಿದರು.
ಮುಂದಿನ ದಿನಗಳಲ್ಲಿ ಮಡಿಕೇರಿ ನಗರದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ಸ್ಥಾಪನೆ ಹಾಗೂ ಯಾವದಾದರು ಒಂದು ರಸ್ತೆಗೆ ವಿಷ್ಣು ಹೆಸರಿಡಲು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವದು ಎಂದರು.
ನಗರಸಭೆಯ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ, ಕೊಡಗಿನ ಬಗ್ಗೆ ವಿಷ್ಣು ಅವರಿಗೆ ಅಪಾರ ಅಭಿಮಾನವಿತ್ತು ಎಂದರು.
ನಟ ಡಾ. ವಿಷ್ಣುವರ್ಧನ್ ಅವರ ಅನೇಕ ಚಿತ್ರಗಳು ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿವೆ. ಬಾಲ್ಯದಲ್ಲಿ ಅವರೊಂದಿಗೆ ಮಾತನಾಡಿದ್ದೇವೆ ಎಂದು ನೆನಪಿಸಿಕೊಂಡರು.
ಸಮಿತಿಯ ಪದಾಧಿಕಾರಿಗಳಾದ ಎಂ.ಕೆ. ಪದ್ಮನಾಭ, ಸಂತೋಷ್, ನಾಗರಾಜ್, ಗುರುಕಿರಣ್, ಪ್ರಕಾಶ್, ಪ್ರಭು ರೈ, ಕುಸುಮ ಗಣೇಶ್, ಸುಕುಮಾರ್, ಫಾರೂಕ್ ಮೊದಲಾದವರು ಹಾಜರಿದ್ದರು.
ಪ್ರಮುಖರಾದ ನಾಗರಾಜ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದ ನಂತರ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.