ಮಡಿಕೇರಿ, ಸೆ. 22: ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್‍ನಡಿಯಲ್ಲಿ ಕೊಟ್ಟುಕತ್ತಿರ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದ ದೇಶಪ್ರೇಮ, ಸೌಹಾರ್ದತೆ ಹಾಗೂ ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವ ಕೊಡವ ಕಾದಂಬರಿ ಆಧಾರಿತ ‘ಕೊಡಗ್‍ರ ಸಿಪಾಯಿ’ ಕೊಡವ ಚಲನಚಿತ್ರ ತಾ. 24 ರಂದು (ನಾಳೆ) ತೆರೆ ಕಾಣಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ಮಾಣದ ನಿರ್ವಹಣೆಯ ನೇತೃತ್ವ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ‘ಕೊಡಗ್‍ರ ಸಿಪಾಯಿ’ ಕುರಿತು ಮಾಹಿತಿ ನೀಡಿದರು. ವೀರಾಜಪೇಟೆ ಕೊಡವ ಸಮಾಜದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಚಿತ್ರ ಬಿಡುಗಡೆ ಸಮಾರಂಭ ನಡೆಯಲಿದ್ದು, ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾಅಚ್ಚಯ್ಯ, ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ, ಕೊಡಗ್‍ರ ಸಿಪಾಯಿ ಚಿತ್ರದ ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಬಾಳುಗೋಡು ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಫೀ.ಮಾ. ಕಾರ್ಯಪ್ಪ, ಜ.ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, “ಕೊಡಗ್‍ರ ಸಿಪಾಯಿ” ಕಾದಂಬರಿ ಬರಹಗಾರ್ತಿ ಉಳುವಂಗಡ ಕಾವೇರಿ ಉದಯ, ಪೂಮಾಲೆ ಕೊಡವ ವಾರ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷÀ ಬೊಳ್ಳಜಿರ ಬಿ. ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ “ಕೊಡಗ್‍ರ ಸಿಪಾಯಿ” ಮೊದಲ ಪ್ರದರ್ಶನ ಆರಂಭ ಗೊಳ್ಳಲಿದ್ದು, ಮಧ್ಯಾಹ್ನ 2 ಗಂಟೆ ಮತ್ತು ಸಂಜೆ 6.30ಕ್ಕ್ಕೂ ಪ್ರದರ್ಶನವಿರುತ್ತದೆ.
ದಕ್ಷಿಣ ಕೊಡಗಿನ ಎಲ್ಲಾ ಊರುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಪಟ್ಟಣಗಳು ಹಾಗೂ ಬೆಂಗಳೂರು, ಮೈಸೂರು ಕೊಡವ ಸಮಾಜಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಮಡಿಕೇರಿ ಕೊಡವ ಸಮಾಜದಲ್ಲಿ ಅ.14 ರಿಂದ ಚಿತ್ರ ಪ್ರದರ್ಶನವಾಗಲಿದೆ ಎಂದು ಅಯ್ಯಪ್ಪ ಮಾಹಿತಿ ನೀಡಿದರು. ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಮಾತನಾಡಿ, ಕಲಾತ್ಮಕ ಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ತಾನು ಸೌಹಾರ್ದ ಸಮಾಜದ ಸಂದೇಶ ಸಾರುವ “ಕೊಡಗ್‍ರ ಸಿಪಾಯಿ” ಯನ್ನು ನಿರ್ಮಿಸಿರುವದಾಗಿ ತಿಳಿಸಿದರು.
ನಟ ಹಾಗೂ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ ಮಾತನಾಡಿ, ಇಲ್ಲಿಯವರೆಗೆ ಸುಮಾರು 13 ಕೊಡವ ಚಲನಚಿತ್ರಗಳು ಬಿಡುಗಡೆಯಾಗಿದ್ದು, “ಕೊಡಗ್‍ರ ಸಿಪಾಯಿ” ಅತ್ಯದ್ಭುತವಾಗಿ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಚಿತ್ರದ ವಿತರಕ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ನಟ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.