ಸುಂಟಿಕೊಪ್ಪ, ಸೆ. 22: ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರುಗಳು ಅಡವಿಟ್ಟ ಚಿನ್ನ ಕಾಣೆಯಾಗಿದೆ. ಅಲ್ಲದೆ 2 ಲಕ್ಷ ನಗದು ಹಣ ದುರುಪಯೋಗವಾಗಿದೆ. ಆಡಳಿತ ಮಂಡಳಿ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳದೆ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಸದಸ್ಯರುಗಳು ತೀವ್ರ ವಾಗ್ದಾಳಿ ನಡೆಸಿದರು.

ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ 2018-19ನೇ ಸಾಲಿನ 60ನೇ ವರ್ಷದ ವಾರ್ಷಿಕ ಮಹಾಸಭೆಯು ಗುಂಡುಗುಟ್ಟಿ ಶ್ರೀ ಮಂಜನಾಥಯ್ಯ ಸಹಕಾರ ಭವನದಲ್ಲಿ ಸಂಘದ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

2018-19ನೇ ಸಾಲಿನಲ್ಲಿ ಸಂಘವು 37,05,391 ರೂ.ಗಳ ಲಾಭಗಳಿಸಿದೆ.ಸದಸ್ಯರುಗಳ ಡಿವಿಡೆಂಡ್ ನಿಧಿಗೆ 15,58,774 ರೂ ನೀಡಲಾಗಿದೆ ಇದು ಸಾಲದು ಎಂದು ಎ.ಪಿ. ರಾಜಪ್ಪ, ಕರುಣಾಕರ ಆಗ್ರಹಿಸಿದರು.

ಮೋಸ, ವಂಚನೆ ಹಣ ದುರುಪಯೋಗ: ಮಹಾಸಭೆಯಲ್ಲಿ ಸದಸ್ಯರುಗಳಿಗೆ ವಿತರಿಸಲಾದ ಲೆಕ್ಕ ಪರಿಶೋಧಕರ(ಅಡಿಟ್) ವರದಿಯ ಪುಸ್ತಕದಲ್ಲಿ ಮೋಸ ವಂಚನೆ ಹಣದುರುಪಯೋಗವನ್ನು ದಾಖಲಿಸಲಾಗಿದೆ. ಇದು ಆಡಳಿತ ಮಂಡಳಿಯ ಬೇಜವಾಬ್ದಾರಿಯ ದ್ಯೋತಕವಾಗಿದೆ. ಅಡಿಟ್ ವರದಿಯಲ್ಲಿ 2017-18ನೇ ಸಾಲಿನ ಲಾಭ ವಿಲೇವಾರಿ ಬಾಪ್ತು ಶೇಕಡ 20ರಂತೆ ಲಾಭಾಂಶ ರೂ 18,36,143 ಡಿವಿಡೆಂಡ್ ವಿಲೇವಾರಿ ಮಾಡಲಾಗಿದೆ. 2017-18ನೇಸಾಲಿನ ಆರಂಭಕ್ಕೆ ಹಿಂದಿನ ಸಾಲಿನ ಡಿವಿಡೆಂಡ್ ರೂ. 2,24,641 ಪಾವತಿಸಲು ಬಾಕಿಯಿದ್ದು ವರದಿ ಸಾಲಿನ ಡಿವಿಡೆಂಡ್ ರೂ. 18,36,143 ಸೇರಿ 20,60,784 ಪಾವತಿಸಲು ಬಾಕಿಯಿದೆ. ವರದಿ ಸಾಲಿನಲ್ಲಿ ಇದರಲ್ಲಿ ಶೇಕಡ 10 ರಷ್ಟು ರೂ. 9,18,071 ಸಂಘದಿಂದ 81,928 ರೂ.ವನ್ನು ಹೆಚ್ಚುವರಿಯಾಗಿ ಸೇರಿಸಿ 10 ಲಕ್ಷ ರೂ. ಪಕೃತಿ ವಿಕೋಪ ಪರಿಹಾರ ನಿಧಿಗೆ ನೀಡಲಾಗಿದೆ. ಆದರೆ ರೂ 17,89,07 ಪಾವತಿಸಿದ್ದು ಸಾಲಾಂತಕ್ಕೆ ದಾಖಲಾಗಿದೆ. ಆದರೆ ಸಾಲಾಂತಕ್ಕೆ ರೂ. 2,71,714 ಪಾವತಿಸಲು ಬಾಕಿ ಇದೆ ಎಂದು ವರದಿ ತಿಳಿಸುತ್ತದೆ. ಆಗ 2 ಲಕ್ಷ 71 ಸಾವಿರ ರೂ. ಹಣ ಎಲ್ಲಿ ಹೋಯಿತು ಎಂದು ಕಂಬಿಬಾಣೆಯ ಜವಾಹರ್, ಕರುಣಾಕರ, ಎಂ.ಎ. ವಸಂತ, ಕೆ.ಡಿ. ರಾಮಯ್ಯ, ಬಾಲಕೃಷ್ಣ ರೈ ಪ್ರಶ್ನಿಸಿದರು.

ಸಹಕಾರಿ ಸಂಘದಲ್ಲಿ ಅಡವಿಟ್ಟ ಚಿನ್ನ ಬಿಡಿಸಲು ಬಂದ ಗ್ರಾಹಕರಿಗೆ ಲಾಕರ್‍ನಲ್ಲಿಟ್ಟಿದ್ದ ಚಿನ್ನ ನಾಪತ್ತೆಯಾಗಿತ್ತು. ಆಗ ಅದನ್ನು ಯಾರು ಎಗರಿಸಿದರು? ಆಡಳಿತ ಮಂಡಳಿ ಏನು ಕ್ರಮ ಕೈಗೊಂಡಿದೆ. ಕಳ್ಳ ಯಾರೆಂದು ಪತ್ತೆ ಹಚ್ಚಿದ್ದೀರಾ? ಸಂಘದಲ್ಲಿ ಕಳ್ಳ ಸಿಬ್ಬಂದಿಗಳಿಗೆ ಏಕೆ ಮಣೆ ಹಾಕುತ್ತೀರಾ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿ ಮನೆಗೆ ಕಳುಹಿಸಿ ಎಂದು ಜವಹರ್, ಕರುಣಾಕರ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಸದಸ್ಯರುಗಳ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಿ ಹಿರಿಯರು ಕಟ್ಟಿ ಬೆಳಸಿದ ಈ ಸಹಕಾರ ಸಂಘವನ್ನು ಉಳಿಸಿ ಬೆಳೆಸಲು ನಿಮಗಿಂತ ನಮಗೂ ಅತ್ಯಂತ ಕಾಳಜಿ ಇದೆ. ಸಂಘಕ್ಕೆ ಕೆಟ್ಟ ಹೆಸರು ಬರಬಾರದು; 2 ಲಕ್ಷ ರೂ. ನಗದು ಹಣ ದುರುಪಯೋಗ ಆಗಿದ್ದು, ಆಡಳಿತ ಮಂಡಳಿಗೆ 15 ದಿನ ಕಳೆದು ತಿಳಿದು ಬಂತು ಈ ಬಗ್ಗೆ ಜವಾಬ್ದಾರಿ ನೀಡಿದ ಸಿಇಓ ಹಾಗೂ ಇಬ್ಬರು ಸಿಬ್ಬಂದಿಯನ್ನು ವಿಚಾರಿಸಲಾಗಿ ಅವರಿಂದ ಸಂಘಕ್ಕೆ ಬರಬೇಕಾದ ಹಣ ವಸೂಲಿ ಮಾಡಲಾಗಿದೆ. ಸಂಘದಲ್ಲಿ ಅಡವಿಟ್ಟ ಚಿನ್ನಾಭರಣ ಕಾಣೆಯಾಗಿದ್ದೂ ಸಹ ಆಡಳಿತ ಮಂಡಳಿ ಗಮನಕ್ಕೆ ತಡವಾಗಿ ಬಂದಿದೆ. ಚುನಾವಣಾ ಸಂದರ್ಭವಾದುದರಿಂದ 4 ತಿಂಗಳು ಆಡಳಿತಾಧಿಕಾರಿ ಅವಧಿಯಲ್ಲಿ ಚಿನ್ನಾಭರಣ ಕಾಣೆಯಾಗಿರಬಹುದು, ಚಿನ್ನಾಭರಣ ಅಡವಿಡುವ ಜವಾಬ್ದಾರಿ ವಹಿಸಿರುವ 3 ಮಂದಿಯಿಂದ ಹಣ ವಸೂಲಿ ಮಾಡಿ ವಾರಿಸುದಾರರಿಗೆ ನೀಡಲಾಗಿದೆ. ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಪೊಲೀಸರು ಸಹಕಾರ ಇಲಾಖೆಯ ಅನುಮತಿ ಬೇಕೆಂದು ಪಟ್ಟು ಹಿಡಿದಿದ್ದರಿಂದ ಅದು ಸಾಧ್ಯವಾಗಲಿಲ್ಲ ನಿಜವಾದ ಆರೋಪಿಯನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುತ್ತೇವೆ ಎಂದು ಸಮಜಾಯಿಸಿಕೆ ನೀಡಿದರು.

ನಿರ್ದೇಶಕರಾದ ಎಂ.ಎನ್. ಕೊಮರಪ್ಪ, ನಿಂಗಪ್ಪ, ಕೆ.ಎಸ್. ಮಂಜುನಾಥ್ ಇದಕ್ಕೆ ಧ್ವನಿಗೂಡಿಸಿದರು. ಸದಸ್ಯರಾದ ಜವಹರ್ ಮಾತನಾಡಿ ಆಡಳಿತ ಮಂಡಳಿಯವರು ಯಾರು ಸಂಘದಲ್ಲಿ ಹಣ ದುರುಪಯೋಗ ಚಿನ್ನ ಅಪಹರಿಸಿದ್ದಾರೆ. ಅವರನ್ನು ಪತ್ತೆ ಹಚ್ಚಿ ಅವರನ್ನು ಮನೆಗೆ ಕಳುಹಿಸಿ, ನಿರಪರಾಧಿಗಳಿಂದ ಹಣ ವಸೂಲಿ ಮಾಡಲಾಗಿದೆ. ಇದು ಸರಿಯಲ್ಲ ಕಳ್ಳನ ಬಗ್ಗೆ ಪೊಲೀಸರಿಗೆ ದೂರು ನೀಡಲು ನಿಮಗ್ಯಾಕೆ ಹಿಂಜರಿಕೆ? ಆಡಳಿತ ಪಕ್ಷದವರೊಂದಿಗೆ 3 ಮಂದಿ ನಿರ್ದೇಶಕರು ಕೈ ಜೋಡಿಸಿರುವದು ಅವರ ಮೌನದಿಂದಲೆ ಗೊತ್ತಾಗುತ್ತದೆ ಎಂದು ಛೇಡಿಸಿದರು.

ಅಧ್ಯಕ್ಷ ಪೊನ್ನಪ್ಪ ಅವರು ಮಹಾಸಭೆಯಲ್ಲಿ ಸದಸ್ಯರುಗಳ ಅಭಿಪ್ರಾಯದಂತೆ ಸಂಘದಲ್ಲಿ ಆದ ದುರುಪಯೋಗ ಬಗ್ಗೆ ಶೀಘ್ರದಲ್ಲೇ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳಲಾಗುವದೆಂದು ಭರವಸೆ ನೀಡಿದರು.

ಸಂಘದ ಉಪಾಧ್ಯಕ್ಷೆ ಜಿ.ಜಿ. ಕೋಮಲ,ಸಿಇಓ ಎಸ್.ಎಸ್. ಪ್ರತಾಪ್ ನಿರ್ದೇಶಕರುಗಳಾದ ಎಂ.ಎನ್. ಕೊಮಾರಪ್ಪ, ಎಸ್.ಪಿ. ನಿಂಗಪ್ಪ, ಕೆ.ಎಸ್. ಮಂಜುನಾಥ, ಪಿ.ಪಿ. ಲೀಲಾವತಿ, ಜರ್ಮಿಡಿಸೋಜ, ದಾಸಂಡ ರಮೇಶ್ ಚಂಗಪ್ಪ, ಡಿ.ಕೆ. ಗಂಗಾಧರ, ಶಶಿಕಾಂತರೈ, ಕೆ.ಪಿ. ಜಗನ್ನಾಥ, ಪಿ.ಸಿ. ಮೋಹನ ಆರ್.ಟಿ. ಲಾಂಛನ ಸಭೆಯಲ್ಲಿ ಉಪಸ್ಥಿತರಿದ್ದರು.