ಮಡಿಕೇರಿ, ಸೆ. 23: ಕರ್ನಾಟಕದಲ್ಲಿ ಅತಿವೃಷ್ಟಿ, ಪ್ರವಾಹ ಭೂಕುಸಿತಗಳಿಂದ ಸುಮಾರು ರೂ. 32,000 ಕೋಟಿ ಹಾನಿಯಂಟಾಗಿದೆ. ಈಗಾಗಲೇ ರಾಜ್ಯ ಸರಕಾರದಿಂದ ಈ ಕುರಿತಾಗಿ ಕೇಂದ್ರಕ್ಕೆ ಪ್ರಸ್ತಾವನೆ, ಮನವಿ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಹಣ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ ಎಂದು ರಾಜ್ಯ ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ವಿ.ಸೋಮಣ್ಣ ನುಡಿದರು.“ಶಕ್ತಿ” ಯೊಂದಿಗೆ ಸುದರ್ಶನ ಅತಿಥಿ ಗೃಹದಲ್ಲಿ ಅವರು ಮಾತನಾಡುತ್ತಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿಮಾಡಿ ಹಣ ಬಿಡುಗಡೆಗೆ ಕೋರಿದ್ದು ಅವರು ಸಮ್ಮತಿಯಿತ್ತಿದ್ದಾರೆ. ಕೇಂದ್ರ ಪ್ರಾಕೃತಿಕ ವಿಕೋಪ ಅಧ್ಯಯನ ತಂಡವೂ ಕರ್ನಾಟಕಕ್ಕೆÉ ಭೇಟಿ ನೀಡಿ ಪರಿಶೀಲಿಸಿ ವಿವರ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿರೀಕ್ಷೆಯಿಟ್ಟುಕೊಂಡಿರುವದಾಗಿ ಅವರು ತಿಳಿಸಿದರು.

(ಮೊದಲ ಪುಟದಿಂದ) ಕೊಡಗು ಜಿಲ್ಲೆಗೆ ಪ್ರಾಕೃತಿಕ ವಿಕೋಪದಿಂದ ರೂ.1,400 ಕೋಟಿ ನಷ್ಟವುಂಟಾಗಿದ್ದು ಕೇವಲ ರೂ. 100 ಕೋಟಿ ಮಾತ್ರ ರಾಜ್ಯ ಸರಕಾರ ಬಿಡುಗಡೆ ಮಾಡಿದೆ, ಉಳಿದ ಹಣ ಯಾವಾಗ ಬಿಡುಗಡೆಯಾಗುತ್ತದೆ? ಎಂಬ “ಶಕ್ತಿ”ಯ ಪ್ರಶ್ನೆಗೆ ಈ ಬಗ್ಗೆ ಚರ್ಚಿಸಿ ಹಂತ ಹಂತವಾಗಿ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕೊಡಗಿನಲ್ಲಿ ಉಸ್ತುವಾರಿ ಸಚಿವರಾಗಿ ಪ್ರತಿ ತಿಂಗಳು ನಿಗದಿತ ದಿನಾಂಕದಂದು ಜಿಲ್ಲೆಗೆ ಸಚಿವರು ಆಗಮಿಸುವ ಉದ್ದೇಶವಿದೆಯೇ ಎಂಬ “ಶಕ್ತಿ” ಯ ಪ್ರಶ್ನೆಗೆ ಸಂದರ್ಭಾನುಸಾರ ಆಗಮಿಸುವದಾಗಿ ತಿಳಿಸಿದ ಅವರು ಉಳಿದಂತೆ ತಮ್ಮ ಎರಡು ಕಣ್ಣುಗಳಂತೆ ಇಬ್ಬರು ಶಾಸಕರಿದ್ದಾರಲ್ಲ, ಅವರೊಂದಿಗೆ ಸಂಸದರು, ವಿಧಾನ ಪರಿಷತ್ ಸದಸ್ಯರೂ ಇರುತ್ತಾರೆ . ಅವರು ನೋಡಿಕೊಳ್ಳುತ್ತಾರೆ ಎಂದು ಬೊಟ್ಟು ಮಾಡಿದರು.

ಇದೀಗ ಮೈಸೂರು ಜಿಲ್ಲೆಯಲ್ಲಿಯೂ ಉಪ ಚುನಾವಣೆಯಿರುವದರಿಂದ ಸಚಿವರ ಉಸ್ತುವಾರಿಯಲ್ಲಿಯೇ ಮೈಸೂರು ದಸರಾ ನಡೆಸಲು ನೀತಿ ಸಂಹಿತೆ ಅಡ್ಡಿಯಾಗುತ್ತದೆಯೇ ಎಂದು ಪ್ರಶ್ನಿಸಿದಾಗ ಚುನಾವಣಾ ಆಯೋಗÀ ಈ ಬಗ್ಗೆ ನಿರ್ಬಂಧಿಸಿಲ್ಲ. ಇದುವರೆಗೆ ಇದ್ದಂತೆಯೇ ಮುಂದುವರಿಯುತ್ತದೆ ಎಂದರು.