ಸೋಮವಾರಪೇಟೆ, ಸೆ. 23: ಸಮೀಪದ ಸೂರ್ಲಬ್ಬಿಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿ, ಮಾಂಸವನ್ನಾಗಿ ಪರಿವರ್ತಿಸಿ ಸಾಗಾಟಗೊಳಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಕುಂಬಾರಗಡಿಗೆ ಗ್ರಾಮದ ಬೆಳ್ಳಿಯಪ್ಪ ಎಂಬವರ ಪುತ್ರ ಯು.ಬಿ. ಸುಬ್ರಮಣಿ ಮತ್ತು ಸೂರ್ಲಬ್ಬಿ ಗ್ರಾಮದ ದೇವಯ್ಯ ಅವರ ಪುತ್ರ ಎನ್.ಪಿ. ಗಣೇಶ್ ಎಂಬವರುಗಳೇ ವನ್ಯಪ್ರಾಣಿಯನ್ನು ಬೇಟೆಯಾಡಿ ಬಂಧಿತರಾದವರು.

ಆರೋಪಿಗಳು ಸೂರ್ಲಬ್ಬಿ ಗ್ರಾಮದ ಸರ್ಕಾರಿ ಶಾಲೆಯ ಬಳಿಯಲ್ಲಿ ವನ್ಯಜೀವಿಯನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸಿ ಸಾಗಾಟಗೊಳಿಸುತ್ತಿದ್ದ ಸಂದರ್ಭ, ಖಚಿತ ಸುಳಿವಿನ ಮೇಲೆ ದಾಳಿ ನಡೆಸಲಾಗಿದೆ.ಕಡವೆಯನ್ನು ಬೇಟೆಯಾಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಬಂಧಿತ ಆರೋಪಿಗಳು ಕಾಡುಹಂದಿಯನ್ನು ಬೇಟೆಯಾಡಿರುವದಾಗಿ ತಿಳಿಸಿದ ಮೇರೆ, ಮಾಂಸವನ್ನು ಹೈದರಾಬಾದಿನ ಸಿ.ಸಿ.ಎಂ.ಬಿ. (ಮೊದಲ ಪುಟದಿಂದ) ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕಾಡು ಹಂದಿಯನ್ನು ಬೇಟೆಯಾಡಿರುವ ಬಗ್ಗೆ ಅರಣ್ಯ ಇಲಾಖೆಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತರಿಂದ ವನ್ಯಪ್ರಾಣಿಯ ಮಾಂಸ, 2 ಬಂದೂಕು, ಟಾರ್ಚ್, ಕತ್ತಿಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‍ನ್ನು ವಶಕ್ಕೆ ಪಡೆಯಲಾಗಿದೆ. ಎಸಿಎಫ್ ನೆಹರು ಮತ್ತು ಆರ್‍ಎಫ್‍ಓ ಶಮಾ ಅವರುಗಳ ಮಾರ್ಗ ದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಾಮಾಜಿಕ ಅರಣ್ಯಾಧಿಕಾರಿ ನಮನ್, ಉಪ ವಲಯ ಅರಣ್ಯಾಧಿಕಾರಿಗಳಾದ ಚಂದ್ರೇಶ್, ಬಿ.ಎಸ್. ಶಶಿ, ಮನು, ಅರಣ್ಯ ರಕ್ಷಕ ಭರಮಪ್ಪ, ಯತೀಶ್, ಚಾಲಕ ನಂದೀಶ್ ಅವರುಗಳು ಪಾಲ್ಗೊಂಡಿದ್ದರು.