ಸುಂಟಿಕೊಪ್ಪ, ಸೆ. 23: ಐಗೂರು, ಕಾಜೂರು, ಯಡವಾರೆ, ಯಡವನಾಡು, ವಿಭಾಗದಲ್ಲಿ ಕಾಡಾನೆಗಳ ಹಿಂಡು ತೋಟ, ಗದ್ದೆಗೆ ಲಗ್ಗೆಯಿಟ್ಟು ಕೃಷಿ ಫಸಲು ನಾಶಪಡಿಸುತ್ತಿದ್ದು, ಕಾಡಾನೆ ಹಾವಳಿಯಿಂದ ಬೆಳೆಗಾರರು ಹೈರಾಣಾಗಿದ್ದಾರೆ.

ಯಡವನಾಡು ಮೀಸಲು ಅರಣ್ಯ ಪ್ರದೇಶದಿಂದ ರಾತ್ರಿ ವೇಳೆ ಕಾಫಿ ತೋಟಗಳಿಗೆ ಪ್ರವೇಶಿಸುವ ಕಾಡಾನೆಗಳು ತೆಂಗು ಅಡಿಕೆ ಬಾಳೆ ಗಿಡಗಳನ್ನು ತಿಂದು ಕಾಫಿ ಗಿಡಗಳನ್ನು ಕಿತ್ತು ನಾಶಪಡಿಸುತ್ತಿವೆ.

ಕಾಜೂರಿನ ಬಾರನಮನೆ, ಮೂಲೆಮಜಲು, ಮಚ್ಚಂಡ ಕುಟುಂಬಸ್ಥರು ಕೂಡಕಂಡಿ ಮನೆಯವರಿಗೆ ಸೇರಿದ ತೋಟಕ್ಕೆ ಬರುವ ಕಾಡಾನೆಗಳು ಕೃಷಿ ಫಸಲು ಆಗಿಂದಾಗ್ಗೆ ನಾಶಪಡಿಸುತ್ತಿವೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ರಸ್ತೆ ತಡೆ ಚಳವಳಿ ನಡೆಸಿದ್ದರೂ ಅರಣ್ಯ ಇಲಾಖೆಯವರು ಕಾಡಿನಿಂದ ನಾಡಿಗೆ ಬರುವ ಕಾಡಾನೆಯನ್ನು ನಿಯಂತ್ರಿಸಲು ಕೆಲಸ ಮಾಡುತ್ತಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.