ಮಡಿಕೇರಿ, ಸೆ. 22: ಕೊಡಗು ಜಿಲ್ಲಾಧಿಕಾರಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದೊಂದಿಗೆ ಜನಾಂಗೀಯ ದ್ವೇಷ ಸೃಷ್ಟಿಸಲು ಯತ್ನಿಸಿರುವ ಷಡ್ಯಂತ್ರವೊಂದು ಬಹಿರಂಗಗೊಂಡಿದ್ದು, ಈ ಸಂಬಂಧ ಪೊಲೀಸ್ ಇಲಾಖೆ ಬಿರುಸಿನ ತನಿಖೆ ಕೈಗೊಂಡಿರುವದಾಗಿ ವಿಶ್ವಾಸನೀಯ ಮೂಲಗಳಿಂದ ‘ಶಕ್ತಿ’ಗೆ ತಿಳಿದು ಬಂದಿದೆ.ಪ್ರಸಕ್ತ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಹಿತ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಸರಕಾರಿ ಜಾಗವನ್ನು ಗುರುತಿಸಿ ಸಂತ್ರಸ್ತರಿಗೆ ನಿವೇಶನ ಹಂಚಲು ಕ್ರಮವಹಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿರುವದು ಎಲ್ಲರಿಗೂ ತಿಳಿದಿರುವ ಅಂಶವಾಗಿದೆ.
ಆ ಮೇರೆಗೆ ಈಗಾಗಲೇ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕಂದಾಯ ಹಾಗೂ ಇತರ ಇಲಾಖೆಗಳಿಗೆ ನಿರ್ದೇಶಿಸಿ, ಅಲ್ಲಲ್ಲಿ ಅತಿಕ್ರಮಣಗೊಂಡಿ ರುವ ಸರಕಾರಿ ಜಾಗವನ್ನು ಗುರುತಿಸಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದು; ಸಂಬಂಧಿಸಿದ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ.
(ಮೊದಲ ಪುಟದಿಂದ) ಈ ನಡುವೆ ಯಾರೋ ತಿಳಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾಧಿಕಾರಿ ವಿರುದ್ಧ ಅಪಪ್ರಚಾರದೊಂದಿಗೆ ಜನಾಂಗೀಯವಾಗಿ ದ್ವೇಷ ಭಾವನೆ ಮೂಡುವಂತೆ ಸುದ್ದಿ ಹಬ್ಬಿಸಿರುವದು ಬೆಳಕಿಗೆ ಬಂದಿದೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿಯನ್ನು ಹಬ್ಬಿಸಿರುವ 35ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿರುವದಾಗಿ ದೃಢಪಟ್ಟಿದೆ.
ಅಲ್ಲದೇ ಇಂತಹ ಅಪಪ್ರಚಾರವನ್ನು ನಡೆಸಲು ಮುಂದಾಗಿರುವ ವ್ಯಾಟ್ಸಾಪ್ ಗುಂಪಿನ ಮುಖ್ಯಸ್ಥರಿಂದ ಹೇಳಿಕೆಯನ್ನು ಪಡೆದಿರುವ ಪೊಲೀಸ್ ಅಧಿಕಾರಿಗಳು ಅಪಪ್ರಚಾರದ ಸೂತ್ರದಾರಿಯ ಪತ್ತೆಗೆ ಮುಂದಾಗಿದ್ದಾರೆ. ತಪ್ಪಿತಸ್ಥ ಯಾರೆಂದು ಖಾತರಿಯಾದೊಡನೆ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಕಾನೂನು ಕ್ರಮ ಜರುಗಿಸುವ ಸಂಭವವಿದೆ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.