ಮಡಿಕೇರಿ, ಸೆ. 22: ಕೊಡಗು ಜಿಲ್ಲಾ ಪಂಚಾಯಿತಿ ಆಡಳಿತವನ್ನು ಮಡಿಕೇರಿ ಅರಮನೆ ಕಟ್ಟಡದಿಂದ ಗಾಲ್ಫ್ ಬಳಿ ನೂತನವಾಗಿ ನಿರ್ಮಿಸಿರುವ ಹೊಸ ಆಡಳಿತ ಭವನಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಮಡಿಕೇರಿಯ ಕೋಟೆ ಕಟ್ಟಡ ಶಿಥಿಲಗೊಂಡಿರುವ ಮೇರೆಗೆ ಉಚ್ಚ ನ್ಯಾಯಾಲಯವು ಕಚೇರಿಗಳ ಸ್ಥಳಾಂತರಕ್ಕೂ ಸೂಚಿಸಿರುವ ಕಾರಣ ಶೀಘ್ರ ಸ್ಥಳಾಂತರಕ್ಕೆ ದಿನಾಂಕ ಸೂಚಿಸುವಂತೆ ಜಿಲ್ಲಾಧಿಕಾರಿ ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ. ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಜಿ.ಪಂ. ನೂತನ ಕಟ್ಟಡದ ಪರಿಶೀಲನೆ ನಡೆಸಿದರು. ಈ ವೇಳೆ ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಇಂಜಿನಿಯರ್ ವಿವೇಕ್, ಗುತ್ತಿಗೆದಾರ ರಾವನ್ ಹಾಜರಿದ್ದರು.