ಮಡಿಕೇರಿ, ಸೆ.23 : ಕೊಡವ ಜನಾಂಗದ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಚೇರಂಬಾಣೆ ಬೇಂಗ್ನಾಡ್ ಕೊಡವ ಸಮಾಜದ ಪ್ರಮುಖರು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರಿಗೆ ದೂರು ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಚೇರಂಬಾಣೆಯ ಬಿ.ಬಾಡಗದ ನಿವಾಸಿ ಚರಣ್ ಆನೆರ ಎಂಬಾತ ಫೇಸ್ಬುಕ್ನ ಅರೆಬಾಷೆ ಮೆಮ್ಸ್ ಎಂಬ ಗ್ರೂಪ್ನಲ್ಲಿ ಕೊಡವ ಜನಾಂಗವನ್ನು ಆಕ್ಷೇಪಾರ್ಹ ಶಬ್ದಗಳಿಂದ ನಿಂದಿಸಿದ್ದು, ಇದು ಇಡೀ ಕೊಡವ ಜನಾಂಗಕ್ಕೆ ನೋವುಂಟು ಮಾಡಿದೆ, ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಕೊಡವರನ್ನು ನಿಂದಿಸುತ್ತಿರುವದಲ್ಲದೆ ಕೊಡವ ಜನಾಂಗದ ಬಗ್ಗೆ ಸುಳ್ಳು ಕಥೆಗಳನ್ನು ಸೃಷ್ಟಿ ಮಾಡುತ್ತಿದ್ದು,
ಈ ಬೆಳವಣಿಗೆಯನ್ನು ಖಂಡಿಸುವದಾಗಿ ಸಮಾಜದ ಪ್ರಮುಖರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಕೊಡವ ಜನಾಂಗದ ವಿರುದ್ಧ ಯಾವ ವ್ಯಕ್ತಿಯೂ ಆಕ್ಷೇಪಾರ್ಹ ಹೇಳಿಕೆಗಳನ್ನು ಬಳಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪೊಲೀಸರು ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಚೇರಂಬಾಣೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಸಮಾಜದ ಕಾರ್ಯದರ್ಶಿ ಬಾಚರಣಿಯಂಡ ಬಿ. ಗಣಪತಿ, ಸದಸ್ಯರುಗಳಾದ ಬಡ್ಡಿರ ಎಂ. ನಾಣಯ್ಯ, ಮಂದಪಂಡ ಎಂ. ಮಂದಣ್ಣ, ಮಂದಪಂಡ ಎಸ್. ಮೇದಪ್ಪ, ಮಂದಪಂಡ ಕಾವೇರಪ್ಪ, ನಿರ್ದೇಶಕರಾದ ಬೊಪ್ರತಂಡ ಎಸ್.ಡಾಲಿ ಅವರುಗಳು ಎಸ್ಪಿಗೆ ದೂರು ಸಲ್ಲಿಸುವ ಸಂದರ್ಭ ಹಾಜರಿದ್ದರು.