ಗೋಣಿಕೊಪ್ಪಲು, ಸೆ. 21: ಪ್ರತಿಯೊಬ್ಬನಲ್ಲೂ ಆರೋಗ್ಯವಿದ್ದರೆ ಕುಟುಂಬದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ. ದುಶ್ಚಟಗಳಿಂದ ದೂರವಿದ್ದು, ನಿತ್ಯ ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಸಲಹೆ ನೀಡಿದರು. ತಿತಿಮತಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ತಿತಿಮತಿ ಬಿಜೆಪಿ ಸ್ಥಾನೀಯ ಸಮಿತಿ ಮತ್ತು ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಸೇವಾ ಸಪ್ತಾಹ ಕಾರ್ಯಕ್ರಮದಡಿ ಆಯುಷ್ಮಾನ್ ಕಾರ್ಡ್ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ರೋಗ ಹರಡುವ ರೀತಿಯೇ ಅರಿವಾಗುತ್ತಿಲ್ಲ. ನಮ್ಮ ಅದೃಷ್ಟ ಕೈಕೊಟ್ಟರೆ ಮಾರಕ ರೋಗಗಳು ಬಾಧಿಸುತ್ತದೆ. ಇದರಿಂದ ಕುಟುಂಬದ ನೆಮ್ಮದಿ ಹದಗೆಡುತ್ತದೆ. ಸಾಮಾನ್ಯ ವರ್ಗದವರಿಗೆ ಅನಾರೋಗ್ಯದ ಪರಿಣಾಮ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಹೀಗಾಗಿ ಪ್ರಧಾನ ಮಂತ್ರಿಯವರು ದೂರದೃಷ್ಟಿಯಿಂದ ಆಯುಷ್ಮಾನ್ ಭಾರತ್ ಎಂಬ ಯೋಜನೆ ಜಾರಿಗೆ ತಂದು ಬಿಪಿಎಲ್ ಪಡಿತರರಿಗೆ ರೂ. 5 ಲಕ್ಷದವರೆಗಿನ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಇದರಂತೆ ಎಪಿಎಲ್ ಪಡಿತರಿಗೂ ಸರ್ಕಾರಿ ಪ್ಯಾಕೇಜ್ ದರದಲ್ಲಿ 30% ವೆಚ್ಚದಲ್ಲಿ ಪ್ರತಿ ಕುಟುಂಬಕ್ಕೆ (ಮೊದಲ ಪುಟದಿಂದ) ರೂ. 1.50 ಲಕ್ಷ ಚಿಕಿತ್ಸೆಯ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸಿದ್ದಾರೆ. ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಅಧ್ಯಕ್ಷ ಡಾ. ನವೀನ್ ಮಾತನಾಡಿ ದೇಶದಲ್ಲಿ ಸುಮಾರು ರೂ. 50 ಕೋಟಿ ಜನರಿಗೆ ಆರೋಗ್ಯ ಚಿಕಿತ್ಸೆ ಪಡೆಯಲು ಆಯುಷ್ಮಾನ್ ಕಾರ್ಡ್ ವಿತರಣೆಯಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು ರೂ. 10 ಕೋಟಿಗೂ ಹೆಚ್ಚು ಜನರಿಗೆ ಈ ಸೌಲಭ್ಯ ದೊರೆಯಲಿದೆ. ರೂ. 8 ಕೋಟಿ ಗ್ರಾಮೀಣ ಭಾಗಕ್ಕೂ, ರೂ. 2 ಕೋಟಿ ನಗರ ಪ್ರದೇಶಕ್ಕೂ ಈ ಸೌಲಭ್ಯ ಹಂಚಿಕೆಯಾಗಲಿದೆ ಎಂದು ಮಾಹಿತಿ ನೀಡಿದರು.
ಆಯುಷ್ಮಾನ್ ಆರೋಗ್ಯ ಕಾರ್ಡಿನ ಫಲಾನುಭವಿಗಳು ಚಿಕಿತ್ಸೆಗೆ ತೆರಳುವ ಮುನ್ನ ಯಾವ ಆಸ್ಪತ್ರೆಗಳು ಈ ಸೌಲಭ್ಯಕ್ಕೆ ಒಳಪಟ್ಟಿದೆ ಎಂಬದನ್ನು ಅರಿತುಕೊಳ್ಳುವದು ಉತ್ತಮ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಕೇಕ್ ಕತ್ತರಿಸಿ ಆಚರಿಸುವದು ವಾಡಿಕೆ. ಆದರೆ ಪ್ರಧಾನ ಮಂತ್ರಿಗಳು ಇಂತಹ ಸಂಪ್ರದಾಯವನ್ನು ಬದಿಗೊತ್ತಿ ಸಾಮಾನ್ಯ ಜನತೆಗೆ ಒಳಿತಾಗುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸಮಾಜದ ಶ್ರೇಯಸ್ಸಿಗೆ ಮಿಡಿಯುವ ಹೃದಯ ಪ್ರಧಾನ ಮಂತ್ರಿಗಳದಾಗಿದೆ. ಇಂತಹ ಸೇವಾ ಮನೋಭಾವದಿಂದ ಸಮಾಜದ ದುರ್ಬಲ ವರ್ಗದವರಿಗೂ ಸೌಲಭ್ಯಗಳು ಒದಗಿಸಲು ಸಾಧ್ಯವಾಗುತ್ತಿದೆ ಎಂದು ವಿಶ್ಲೇಶಿಸಿದರು. ಆಯುಷ್ಮಾನ್ ಭಾರತ್ ವೈದ್ಯಕೀಯ ಕಾರ್ಡ್ ಪಡೆದುಕೊಳ್ಳಲು ಸ್ಥಳೀಯ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದು ಸೌಲಭ್ಯವನ್ನು ಪಡೆದುಕೊಂಡರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ ನೇತೃತ್ವದಲ್ಲಿ ತಿತಿಮತಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ಜಿ.ಪಂ ಸದಸ್ಯ ಶಶಿ ಸುಬ್ರಮಣಿ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ, ತಿತಿಮತಿ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಎನ್.ಎನ್. ಅನೂಪ್‍ಕುಮಾರ್, ದೇವರಪುರ ಗ್ರಾಮದ ಬಿಜೆಪಿ ಪ್ರಮುಖ ಮನೆಯಪಂಡ ಮಹೇಶ್ ಹಾಗೂ ಹಿರಿಯ ಕಾರ್ಯಕರ್ತ ಎಂ.ಎನ್. ಕೃಷ್ಣ ಹಾಜರಿದ್ದರು.
ಚಿತ್ರವರದಿ : ಎನ್.ಎನ್. ದಿನೇಶ್