ದ.ಸಂ.ಸ. ಎಚ್ಚರಿಕೆ
ಮಡಿಕೇರಿ, ಸೆ. 21: ಮಳೆಹಾನಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ವಿತರಣೆ ಮತ್ತು ದಲಿತ ಸಮುದಾಯದ ಸಮಸ್ಯೆಗಳಿಗೆ ಮುಂದಿನ ಎರಡು ವಾರಗಳ ಒಳಗೆ ಜಿಲ್ಲಾಡಳಿತ ಸ್ಪಂದಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸುರಿದ ಮಹಾಮಳೆÉಯಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಹಲವು ಕುಟುಂಬಗಳನ್ನು ಪರಿಹಾರ ನೀಡದೆ ಜಿಲ್ಲಾಡಳಿತ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಕಳೆದ ವರ್ಷ ಮೈತ್ರಿ ಸರ್ಕಾರ ಮನೆ ಕಳೆÉದುಕೊಂಡವರಿಗೆ ತಾತ್ಕಾಲಿಕವಾಗಿ ನೆಲೆ ಕಂಡುಕೊಳ್ಳಲು ರೂ. 10 ಸಾವಿರ ಬಾಡಿಗೆ ಮತ್ತು ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ ನೂತನ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಿತ್ತು. ಆದರೆ, ಈ ಬಾರಿಯ ಸಂತ್ರಸ್ತರಿಗೆ ಇಂದಿನ ಬಿಜೆಪಿ ಸರ್ಕಾರ ಬಾಡಿಗೆ ರೂಪದಲ್ಲಿ ಕೇವಲ ರೂ. 5 ಸಾವಿರ ಹಾಗೂ ಮನೆ ನಿರ್ಮಾಣಕ್ಕೆ ರೂ. 5 ಲಕ್ಷಗಳನ್ನಷ್ಟೆ ಮೀಸಲಿಟ್ಟಿದೆ. ಇದನ್ನು ಖಂಡಿಸುವದಾಗಿ ತಿಳಿಸಿದ ಹೆಚ್.ಎಲ್. ದಿವಾಕರ್, ಕನಿಷ್ಟ ಬಾಡಿಗೆ ಮೊತ್ತ 15 ಸಾವಿರ ಮತ್ತು ಮನೆ ನಿರ್ಮಾಣಕ್ಕೆ ತಲಾ ರೂ. 15 ಲಕ್ಷಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಎಸ್‍ಸಿ-ಎಸ್‍ಟಿ ಉದ್ಧಾರಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಡುತ್ತಿದೆ. ಆದರೆ, ಈ ಅನುದಾನ ಎಲ್ಲಿಯೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಮತ್ತು ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ದಿವಾಕರ್ ಆರೋಪಿಸಿದರು. ದಲಿತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ನಾಲ್ಕು ಹಂತಗಳಲ್ಲಿ ಹೋರಾಟವನ್ನು ರೂಪಿಸುವದಾಗಿ ತಿಳಿಸಿದರು.
ಮೊದಲಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ, ಇದಕ್ಕೂ ಸ್ಪಂದಿಸದಿದ್ದಲ್ಲಿ ಅರೆ ಬೆತ್ತಲೆ ಮೆರವಣಿಗೆ, ನಂತರ ಉರುಳು ಸೇವೆ ಮತ್ತು ವಿವಿಧ ಇಲಾಖಾ ಕಛೇರಿಗಳ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಪಾವಗಡದಲ್ಲಿ ಸಂಸದ ನಾರಾಯಣ ಸ್ವಾಮಿ ಅವರನ್ನು ದಲಿತ ಎಂಬ ಕಾರಣಕ್ಕಾಗಿ ಊರಿಗೆ ಪ್ರವೇಶ ನೀಡದೆ ಮೌಢ್ಯವನ್ನು ಮೆರೆದ ಪ್ರಕರಣ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಅವರು, ಶಿವಮೊಗ್ಗ ಜಿಲ್ಲೆಯ ಮಳೆಹಾನಿ ಸಂತ್ರಸ್ತರನ್ನು ಕೀಳಾಗಿ ಕಂಡಿರುವದನ್ನು ಖಂಡಿಸುವದಾಗಿ ತಿಳಿಸಿದರು.
ಸಮಿತಿಯ ಸಂಪಾಜೆ ಹೋಬಳಿಯ ಸಂಚಾಲಕ ಗಣೇಶ್ ಹಾಗೂ ಲಕ್ಷ್ಮಣ ಮಾತನಾಡಿ, ಮನೆ ಬಾಡಿಗೆ ಹಣ ಪಾವತಿಯಾಗದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ಸ್ಪಂದನೆ ದೊರಕಿಲ್ಲ. ದಲಿತರ ಪರವಾದ ಕೃಷಿ ಯೋಜನೆಗಳ ಲಾಭವನ್ನು ಪಡೆಯಲು ಸಂಬಂಧಿಸಿದ ಇಲಾಖೆಗೆ ಅಗತ್ಯ ದಾಖಲೆಗಳನ್ನು ನೀಡಿದರೂ ಸೌಲಭ್ಯವನ್ನು ಬಿಡುಗಡೆ ಮಾಡದೆ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ್ ಹಾಗೂ ಮಡಿಕೇರಿ ತಾಲೂಕು ಸಂಚಾಲಕ ಎಂ.ಪಿ. ದೀಪಕ್ ಉಪಸ್ಥಿತರಿದ್ದರು.