ಮಡಿಕೇರಿ, ಸೆ. 21: ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಹುಟ್ಟುಹಬ್ಬವನ್ನು ಜಿಲ್ಲೆಯಾದ್ಯಂತ ಬಿ.ಜೆ.ಪಿ. ಪಕ್ಷ ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ವಿವಿಧ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.*ಗೋಣಿಕೊಪ್ಪಲು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬದ ಅಂಗವಾಗಿ ತಿತಿಮತಿ ಮೊರಾರ್ಜಿ ಶಾಲೆ ಮತ್ತು ಆಶ್ರಮ ಶಾಲೆಯ ಮಕ್ಕಳಿಗೆ ಬಿಸ್ಕೆಟ್, ರಸ್ಕ್ ಮತ್ತು ಸಿಹಿ ತಿನಿಸುಗಳನ್ನು ಹಂಚಿ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.
ಇದೇ ಸಂದರ್ಭ ಮಾತನಾಡಿದ ಅವರು, ಮೋದಿಯವರ ಆದರ್ಶದ ಬದುಕು ಮತ್ತು ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಮೋದಿಯವರಂತಹ ನಾಯಕರಾಗಿ ಬೆಳೆಯಲು ಇಂದಿನಿಂದಲೇ ತಯಾರಿ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಅನೂಪ್ ಕುಮಾರ್, ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗೋವಿಂದ, ಕಾರ್ಯಕರ್ತರಾದ ಆನಂದ, ರಂಜಿತ್, ಶಿವು, ಅದ್ಯಾಪಕ ವೃಂದದವರು ಹಾಜರಿದ್ದರು.ಭಾಗಮಂಡಲ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ಭಾಗಮಂಡಲದಲ್ಲಿ ಆಚರಿಸಲಾಯಿತು. ಇಲ್ಲಿನ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಸ್ಥಳೀಯರಿಗೆ ಸಿಹಿ ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ಸಿರಕಜೆ ಭವನ್ಕುಮಾರ್, ಕಾರ್ಯದರ್ಶಿ ಬೋಳನ ಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜುರೈ, ಪುರುಷೋತ್ತಮ ಭಾಸ್ಕರ, ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ಸಂಘದ ಶಿವವೆಂಕಟರಮಣ, ನಿಡ್ಯಮಲೆ ಚಲನ್ ಹಾಗೂ ನರೇಂದ್ರ ಮೋದಿ ಅಭಿಮಾನಿಗಳು ಪಾಲ್ಗೊಂಡಿದ್ದರು.ಕೂಡಿಗೆ: ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಹಾಯ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ದಿನಬಳಕೆ ವಸ್ತು ಹಾಗೂ ಹಣ್ಣು-ಹಂಪಲುಗಳನ್ನು ನೀಡಲಾಯಿತು. ಈ ಸಂದರ್ಭ ವೃದ್ಧರ ಕಷ್ಟಕ್ಕೆ ಮಿಡಿದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಜಯ ವೈಯಕ್ತಿಕವಾಗಿ ರೂ. 10 ಸಾವಿರ ಧನ ಸಹಾಯವನ್ನು ನೀಡಿದರು.
ಈ ಸಂದರ್ಭ ಸ್ಥಳೀಯ ಉದ್ಯಮಿಗಳಾದ ಕಿಶೋರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಜಿ. ಮಂಜುನಾಥ್, ಯುವ ಮೋರ್ಚಾ ಅಧ್ಯಕ್ಷ ಚಿನ್ನಪ್ಪ ಮೊದಲಾದವರು ಹಾಜರಿದ್ದರು.