ಶನಿವಾರಸಂತೆ, ಸೆ. 21: ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಪಿ. ಬೋಜಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

1993-94 ರಲ್ಲಿ ಇದ್ದ ಪಂಚಾಯಿತಿ ಹಳೆ ಕಟ್ಟಡ ಶಿಥಿಲಗೊಂಡು ಪಂಚಾಯಿತಿಯ ದಾಖಲೆ ಪತ್ರಗಳನ್ನು ಇರಿಸಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿ ಇದನ್ನು ಮನಗೊಂಡು ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನ ಪಟ್ಟಾಗ, ಕಟ್ಟಡ ಕಟ್ಟುವ ಜಾಗದ ಬಗ್ಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅರಣ್ಯ ಇಲಾಖೆಯ ಜಾಗವೆಂದು ಕ್ರಿಯಾಲೋಪ ಮಾಡಿ ಅಡಚಣೆ ಮಾಡಿ ತೊಂದರೆಗೆ ಒಳಪಡಿಸಿದರು. ಆ ಸಂದರ್ಭ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ.ಎ. ಜೀವಿಜಯ ಅವರನ್ನು ಕಂಡು ಮನವರಿಕೆ ಮಾಡಿಕೊಂಡಾಗ ಸಂಬಂಧಪಟ್ಟ ಅರಣ್ಯ ಸಚಿವರು, ಕಂದಾಯ ಸಚಿವರು, ಗ್ರಾಮೀಣ ಅಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಕಟ್ಟಡ ಕಟ್ಟಲು ಇದ್ದ ಅಡ್ಡಿ-ಆತಂಕಗಳನ್ನು ಸರಿಪಡಿಸಿ 2013-14ನೇ ಸಾಲಿನಲ್ಲಿ ಕಟ್ಟಡಕ್ಕೆ ತಳಪಾಯ ಹಾಕಲು ಸಹಕರಿಸಿದ್ದರು. ಈಗಿನ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಅಧಿಕಾರಿಗಳು ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದುವರಿಸಿ ಕಟ್ಟಡ ಉದ್ಘಾಟನೆ ಮಾಡಲಾಗಿದೆ ಎಂದರು.