ಕುಶಾಲನಗರ, ಸೆ 21: ಆಟೋಟ ಸ್ಪರ್ಧೆ ಸಂದರ್ಭ ಕಾಲೇಜಿನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಇಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕುಶಾಲನಗರ ಸಮೀಪ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಭಾರತ್ಮಾತಾ ಪದವಿ ಕಾಲೇಜಿನಲ್ಲಿ ಕ್ರೀಡಾದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆ ಸಂದರ್ಭ ಕ್ಷುಲ್ಲಕ ಕಾರಣ ವಿಕೋಪಕ್ಕೆ ತಿರುಗಿ ದ್ವಿತೀಯ ಪದವಿಯ ವಿದ್ಯಾರ್ಥಿಗಳಿಬ್ಬರು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ.
ಕ್ರೀಡೆ ಸಂದರ್ಭ ಧ್ವನಿವರ್ಧಕದಲ್ಲಿ ಹಾಡು ಬದಲಾಯಿಸುವ ಬಗ್ಗೆ ಅಂತಿಮ ಪದವಿ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಕಿರಿಯ ವಿದ್ಯಾರ್ಥಿಯೊಬ್ಬನ ತಲೆಗೆ ಪ್ಲಾಸ್ಟಿಕ್ ಚೇರ್ನಿಂದ ಹಲ್ಲೆ ನಡೆಸಿದ್ದು, ಈ ಘರ್ಷಣೆ ತಪ್ಪಿಸಲು ಮಧ್ಯ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಕೂಡ ಅಲ್ಪಸ್ವಲ್ಪ ಗಾಯಗಳುಂಟಾಗಿವೆ. ತಲೆಗೆ ತೀವ್ರ ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದಿದ್ದಾರೆ.
ಘಟನೆ ತಿಳಿದ ಕಾಲೇಜಿನ ಪ್ರಾಂಶುಪಾಲರು ಬೈಲುಕೊಪ್ಪ ಪೊಲೀಸರಿಗೆ ದೂರು ನೀಡಿದ್ದು ಪರಿಸ್ಥಿತಿ ತಿಳಿಗೊಂಡಿತು. ನಂತರ ಕೆಲ ವಿದ್ಯಾರ್ಥಿಗಳ ಪೋಷಕರು ಮತ್ತು ಸ್ಥಳೀಯರು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಧಾಳಿ ಮಾಡಿದ ಘಟನೆಯೂ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಸಂದರ್ಭ ಪೊಲೀಸರು ಮತ್ತೆ ಕಾಲೇಜಿಗೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಗಾಂಜಾ ಸೇವಿಸಿ ಕಿರಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆ ಮರುಕಳಿಸುತ್ತಿವೆ ಎಂದು ಕಿರಿಯ ವಿದ್ಯಾರ್ಥಿಗಳಿಂದ ಆರೋಪಗಳು ಕೇಳಿಬಂದವು. ಘಟನೆ ಹಿನ್ನೆಲೆಯಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ತರಗತಿಗಳಿಗೆ ರಜೆ ನೀಡಲಾಯಿತು. ಘಟನೆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವದಾಗಿ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.