ಕರಿಕೆ, ಸೆ. 21: ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಗೆ ಬಯೋಮೆಟ್ರಿಕ್ ನೀಡುವದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಸರಕಾರದ ಆದೇಶದಂತೆ ಪ್ರತಿ ತಿಂಗಳ ಮೂವತ್ತೊಂದನೇ ದಿನಾಂಕದೊಳಗಾಗಿ ಒಂದು ಕುಟುಂಬದ ಓರ್ವ ಸದಸ್ಯ ಬಯೋಮೆಟ್ರಿಕ್ ನೀಡಿ ಪಡಿತರ ಆಹಾರ ಪಡೆಯುವದು ಕಡ್ಡಾಯವಾಗಿದ್ದು ಅದರಂತೆ ನ್ಯಾಯಬೆಲೆ ಅಂಗಡಿಯ ಮುಂದೆ ಪ್ರತಿದಿನ ಸರತಿಸಾಲಿನಲ್ಲಿ ನೂರಾರು ಜನ ಬಂದು ನಿಲ್ಲುತ್ತಿದ್ದು ಸರ್ವರ್ ಸಮಸ್ಯೆಯಿಂದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಹಿಡಿ ಶಾಪ ಹಾಕುತ್ತಾ ಹಿಂದಿರುಗುತ್ತಿರುವದು ಸಾಮಾನ್ಯವಾಗಿದೆ.

ಗಡಿ ಗ್ರಾಮ ಕರಿಕೆಯಲ್ಲಿ ಬಡ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ದೈನಂದಿನ ತಮ್ಮ ಕೆಲಸ ಕಾರ್ಯವನ್ನು ಬದಿಗೊತ್ತಿ ಏಳೆಂಟು ಕಿ.ಮಿ. ದೂರದ ನ್ಯಾಯ ಬೆಲೆ ಅಂಗಡಿ ಮುಂದೆ ಹೋಗಿ ದಿನ ಕಳೆಯುವದರಿಂದ ಅತ್ತ ಕೆಲಸವು ಇಲ್ಲ ಇತ್ತ ಪಡಿತರ ಪಡೆಯಲು ಆಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರ್ದೇಶಕ ಗೌರವ್ ಅವರನ್ನು ‘ಶಕ್ತಿ’ ಮಾತನಾಡಿಸಿದಾಗ ಸರ್ವರ್ ಸಮಸ್ಯೆ ಇಡಿ ರಾಜ್ಯದಲ್ಲಿದ್ದು, ಇಪ್ಪತ್ತಾರು ಜಿಲ್ಲೆಯ ನ್ಯಾಯಬೆಲೆ ಅಂಗಡಿಯವರು ಒಂದೇ ಸರ್ವರ್ ಉಪಯೋಗಿಸುತ್ತಿದ್ದು, ಇದರಿಂದಾಗಿ ಸಮಸ್ಯೆಯಾಗುತ್ತಿದೆ.

ಈ ಬಗ್ಗೆ ಆಹಾರ ಇಲಾಖೆಯ ಮುಖ್ಯ ಕಚೆÉೀರಿಗೆ ಮಾಹಿತಿ ನೀಡಿದ್ದು, ಈ ಸಮಸ್ಯೆ ಸರಿಪಡಿಸಲು ಕೂಡಲೇ ಕ್ರಮ ವಹಿಸಲಾಗುವದು ಎಂದರು.

- ಸುಧೀರ್