ಮಡಿಕೇರಿ, ಸೆ. 21: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ವ್ಯಾಪ್ತಿಯ, ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿಯಿಂದ ಅಣಬೆ ಕೃಷಿ ಕುರಿತಾದ ಒಂದು ದಿನದ ತರಬೇತಿ ಕಾರ್ಯಕ್ರಮ ಕಾನೂರು ಮಹಿಳಾ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಸಮಾಜದ ಅಧ್ಯಕ್ಷೆ ಮಾಯಮ್ಮ ಸಿ.ಬಿ. ಹಾಗೂ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಕುಶಾಲಪ್ಪ ನೆರವೇರಿಸಿದರು.

ಡಾ. ಕುಶಾಲಪ್ಪ ಅವರು ನೆರಳಿನ ಆಶ್ರಯದಲ್ಲಿ ಬೆಳೆಯುವ ಕೊಡಗಿನ ಕಾಫಿ ಪ್ರಪಂಚದಲ್ಲೇ ಅತ್ಯುತ್ತಮವಾಗಿದ್ದು, ಇದಕ್ಕೆ gi ಟ್ಯಾಗ್ ಸಂದಿದೆ ಹಾಗೂ ಮುಂಬರುವ ದಿನಗಳಲ್ಲಿ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗಲಿದೆ ಎಂದು ನುಡಿದರು. ಜೊತೆಗೆ ಕಾಫಿ ತೋಟಗಳಲ್ಲಿ ಮರಗಳ ವೈವಿಧ್ಯತೆಯನ್ನು ಹೆಚ್ಚಿಸಿಕೊಂಡು, ಸ್ಥಳೀಯ ಹಣ್ಣಿನ ಬೆಳೆಗಳು, ಸ್ಥಳೀಯ ಆರ್ಕಿಡ್ ಕೃಷಿ ಹಾಗೂ ನೀರು ಸಂರಕ್ಷಣೆಗಾಗಿ ಭತ್ತ ಬೇಸಾಯ ಮುಂದುವರಿಸಬೇಕೆಂದು ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಅವರು ಅಣಬೆ ಸೇವನೆಯಿಂದ ಆಗುವ ಉಪಯೋಗಗಳು, ಬೆಳೆಯುವ ವಿಧಾನ, ವಿವಿಧ ತಳಿಗಳು, ಶೇಖರಣೆ ಹಾಗೂ ರೋಗದ ಹತೋಟಿ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸಮಗ್ರ ಮಾಹಿತಿ ನೀಡಿದರು ಹಾಗೂ ಪ್ರಸ್ತುತ ಅವಕಾಶಗಳ ಬಗ್ಗೆ ತಿಳಿಸಿಕೊಡುತ್ತಾ,್ತ ಮುಂಬರುವ ದಿನಗಳಲ್ಲಿ ಅಣಬೆ ಕೃಷಿ ಅಧಿಕ ವರಮಾನ ತಂದುಕೊಡುವ, ಅದರಲ್ಲೂ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಬಲ್ಲ ಉದ್ಯಮವಾಗಬಲ್ಲದು ಎಂದು ತಿಳಿಸಿದರು.

ವಿಸ್ತರಣಾ ಶಿಕ್ಷಣದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿಯವರು ವಿಸ್ತರಣಾ ಶಿಕ್ಷಣ ಘಟಕದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾನೂರು ಮಹಿಳಾ ಸಮಾಜದ ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಮಾಹಿತಿ ಪಡೆದರು.

ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿಯವರು, ಸಂಪನ್ಮೂಲ ವ್ಯಕ್ತಿಗಳಾಗಿ ರಮೇಶ್, ಸಹಾಯಕ ತೋಟಗಾರಿಕೆ ಅಧಿಕಾರಿ, ಮಡಿಕೇರಿ ಮಹಿಳಾ ಸಮಾಜದ ಕಾರ್ಯದರ್ಶಿ ನವೀನ ಕೆ.ಎಂ., ವಿಸ್ತರಣಾ ಶಿಕ್ಷಣ ಘಟಕದ ಬೇಸಾಯತಜ್ಞ ಡಾ. ಬಸವಲಿಂಗಯ್ಯ, ತೋಟಗಾರಿಕೆ ತಜ್ಞೆ ವಿದ್ಯಾಶ್ರೀ ಹಾಗೂ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಆಶಿಕ್ ಉಪಸ್ಥಿತರಿದ್ದರು.