ಮಡಿಕೇರಿ, ಸೆ. 20: ಶಿಕ್ಷಣಕ್ಕೆ ಆದ್ಯತೆ ನೀಡುವ ಪೂರ್ವಪರ ಚಿಂತನೆಯೊಂದಿಗೆ ಶಿಕ್ಷಣ ಪ್ರೇಮಿಗಳ ಒತ್ತಾಸೆಯೊಂದಿಗೆ 1863ರಲ್ಲೇ ಸ್ಥಾಪನೆಗೊಂಡಿರುವ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್)ಗೆ ಇದೀಗ ಸುಮಾರು 153 ವರ್ಷಗಳ ಇತಿಹಾಸ. ಈ ವಿದ್ಯಾನಿಧಿಯಲ್ಲಿ ಪ್ರಸ್ತುತ 7.74 ಕೋಟಿಯಷ್ಟು ಹಣ ಸಂಗ್ರಹಿತವಾಗಿದ್ದು, ವರ್ಷಂಪ್ರತಿ ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ‘ಮೆರಿಟ್’ ಆಧಾರದಲ್ಲಿ, ವಿದ್ಯಾರ್ಥಿ ವೇತನ ಹಾಗೂ ಉನ್ನತ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಇದರಂತೆ ಈ ಬಾರಿಯ ನಿಧಿಯ ವಾರ್ಷಿಕ ಮಹಾಸಭೆ ಹಾಗೂ ವಿವಿಧ ತರಗತಿಗಳಲ್ಲಿ ಅತ್ಯುನ್ನತ ಸಾಧನೆ ತೋರಿರುವ ವಿದ್ಯಾರ್ಥಿಗಳನ್ನು ತಾ. 21ರಂದು (ಇಂದು) ಪುರಸ್ಕರಿಸಲಾಗುತ್ತದೆ. ಮಡಿಕೇರಿ ಕೊಡವ ಸಮಾಜದಲ್ಲಿ ಬೆಳಿಗ್ಗೆ 10.30ಕ್ಕೆ ವಾರ್ಷಿಕ ಮಹಾಸಭೆ ಜರುಗಲಿದ್ದು, ಬಳಿಕ 11.30ಕ್ಕೆ ಪ್ರತಿಭಾ ಪುರಸ್ಕಾರ ಜರುಗಲಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯಲ್ಲಿ ಪ್ರಸ್ತುತ ಲೆಫ್ಟಿನೆಂಟ್ ಜನರಲ್ ಆಗಿರುವ ಪಟ್ಟಚೆರವಂಡ ಸಿ. ತಿಮ್ಮಯ್ಯ ಹಾಗೂ ದಾನಿ ಪಾಲೇಕಂಡ ಜಿ. ಬೆಳ್ಯಪ್ಪ ಅವರುಗಳು ಆಗಮಿಸುತ್ತಿದ್ದಾರೆ. ವಿದ್ಯಾನಿಧಿಯ ಅಧ್ಯಕ್ಷ ಕೂತಂಡ ಪಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.

ಪ್ರಸಕ್ತ ವರ್ಷ ವಿವಿಧ ದಾನಿಗಳು ವಿದ್ಯಾನಿಧಿಗೆ ರೂ. 60.84 ಲಕ್ಷ ಹಣವನ್ನು ನೀಡಿದ್ದು, ಪ್ರಸ್ತುತ ರೂ. 7.74 ಕೋಟಿ ಅನುದಾನ ನಿಧಿಯ ಖಾತೆಯಲ್ಲಿದೆ. ಈ ಬಾರಿ ಎಸ್.ಎಸ್.ಎಲ್.ಸಿ.ಯಿಂದ ಮೇಲ್ಪಟ್ಟು ಅತ್ಯುನ್ನತ ಸಾಧನೆ ತೋರಿರುವ ಒಟ್ಟು 32 ಮಕ್ಕಳಿಗೆ ರೂ.1.86 ಲಕ್ಷ ಹಣವನ್ನು ವಿತರಿಸಲಾಗುತ್ತಿದೆ. ಇತರ ಸಾಧಕ ವಿದ್ಯಾರ್ಥಿಗಳಿಗೆ ನಂತರದ ದಿನಗಳಲ್ಲಿ ವಿದ್ಯಾರ್ಥಿವೇತನ ನೀಡಲಾಗುವದು. ಕಳೆದ ವರ್ಷ ಈ ಎಲ್ಲಾ ಮೊತ್ತ ಸೇರಿ ರೂ. 43.20 ಲಕ್ಷ ಹಣವನ್ನು ಸುಮಾರು 785 ಮಕ್ಕಳಿಗೆ ನೀಡಲಾಗಿದ್ದು, ಈ ಬಾರಿ ಈ ಮೊತ್ತ ಅಂದಾಜು ರೂ. 45 ಲಕ್ಷ ಮೀರಲಿದೆ ಎಂದು ನಿಧಿಯ ಕಾರ್ಯದರ್ಶಿ ಮೇದುರ ಕಾವೇರಪ್ಪ ಅವರು ಮಾಹಿತಿ ನೀಡಿದ್ದಾರೆ.

ಶೈಕ್ಷಣಿಕ ಸಾಧನೆಯಿಂದಲೇ ಅಭಿವೃದ್ಧಿ ಎಂಬ ಚಿಂತನೆಯಿಂದ ಹಿರಿಯರು ಇದನ್ನು ಸ್ಥಾಪಿಸಿದ್ದಾರೆ. ಸಾಧಕರಿಗೆ ಪ್ರೋತ್ಸಾಹಧನದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ಜನಾಂಗದ ವಿದ್ಯಾರ್ಥಿಗಳಿಗೂ ಸಹಕಾರ ನೀಡಲಾಗುತ್ತಿದೆ. ಕ್ರೀಡಾ ಸಾಧಕರನ್ನೂ ಪರಿಗಣಿಸ ಲಾಗುವದು. ಅಲ್ಲದೆ, ಗ್ರಾಮೀಣ

(ಮೊದಲ ಪುಟದಿಂದ) ಪ್ರದೇಶದಲ್ಲಿ ಶಾಲೆಗಳ ಅಭಿವೃದ್ಧಿಗೂ ಜಾತಿ ರಹಿತವಾಗಿ ನೆರವು ನೀಡಲಾಗುತ್ತಿದೆ. ಈತನಕ ಸಾಕಷ್ಟು ಮಂದಿ ಉತ್ತಮ ಸ್ಥಾನಗಳನ್ನು ಪಡೆದಿದ್ದಾರೆ. ಒಟ್ಟು ಮೊತ್ತಕ್ಕೆ ಬರುವ ಬಡ್ಡಿ ಹಣವನ್ನು ದಾನಿಗಳ ನಿಬಂಧನೆಯಂತೆ ವಿತರಿಸ ಲಾಗುತ್ತಿದೆ. ಇದಲ್ಲದೆ ಮಡಿಕೇರಿ ತಾಲೂಕಿನಲ್ಲಿ ರೋಟರಿ ಸಹಾಯ ದೊಂದಿಗೆ ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲ ವಾಗುವಂತೆ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಕೆರಿಯರ್ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಇದರೊಂದಿಗೆ ಮತ್ತೋರ್ವ ದಾನಿ ಬೊಳ್ಳಚೆಟ್ಟಿರ ಅಪ್ಪಚ್ಚು ಅವರು ಪ್ರತಿವರ್ಷ ರೂ.2.40 ಲಕ್ಷ ಹಣವನ್ನು ಜಿಲ್ಲೆಯ ಮೂಲನಿವಾಸಿಗಳ ಮಕ್ಕಳಿಗೆ ಪ್ರೋತ್ಸಾಹ ನೀಡಲು ನೀಡುತ್ತಿದ್ದಾರೆ. ತಾ.21ರಂದು (ಇಂದು) 32 ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಮುಂದೆ ಪರಿಗಣಿತರಾದ ಇತರರಿಗೆ ವಿದ್ಯಾರ್ಥಿ ವೇತನ ನೀಡಲಾಗುವದು ಎಂದರು.