ಶ್ರೀಮಂಗಲ, ಸೆ. 20 : 2018-19ನೇ ಸಾಲಿನಲ್ಲಿ (ಕಳೆದ ವರ್ಷ) ಅತಿವೃಷ್ಟಿಗೆ ತುತ್ತಾಗಿ ಬೆಳೆ ನಷ್ಟಗೊಂಡು ಪರಿಹಾರ ಅರ್ಜಿಗಳನ್ನು ಸಲ್ಲಿಸಿದರೂ, ಅಂತವರಿಗೆ ಪರಿಹಾರ ದೊರೆಯದೇ ಇರುವ ಪ್ರಕರಣಗಳಲ್ಲಿ ಮತ್ತೆ ಪರಿಹಾರ ಲಭ್ಯವಾಗುವಂತೆ ಶುಕ್ರವಾರ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಳೆದ ಆಗಸ್ಟ್ 30ರಂದು ಸಮಿತಿಯಿಂದ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಕಳೆದ ವರ್ಷ ಬೆಳೆ ನಷ್ಟಗೊಂಡು ಅರ್ಜಿ ಸಲ್ಲಿಸಿರುವ ಕೆಲವು ಬೆಳೆಗಾರರಿಗೆ ಪರಿಹಾರ ಹಣ ಪಾವತಿಯಾಗದೇ ಇರುವ ಬಗ್ಗೆ ಗಮನ ಸೆಳೆದಿದ್ದರು. ಈ ಸಂದರ್ಭ ಅಂತಹ ಬೆಳೆಗಾರರ ಅರ್ಜಿಗಳನ್ನು ದಾಖಲೆ ಸಹಿತ ಸಂಗ್ರಹಿಸಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಮಂಗಲ, ಹುದಿಕೇರಿ, ಪೆÇನ್ನಂಪೇಟೆ ಹೋಬಳಿ 210 ಬೆಳೆಗಾರರ ಅರ್ಜಿಗಳನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಯಿತು. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ

(ಮೊದಲ ಪುಟದಿಂದ) ಪರಿಹಾರ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

ಶ್ರೀಮಂಗಲ ಮತ್ತು ಬಾಳೆಲೆ ಹೋಬಳಿಯಲ್ಲಿ ಆಧಾರ್ ಕಾರ್ಡ್ ಮಾಡಲು ಮತ್ತು ಆಧಾರ್ ಕಾರ್ಡ್ ತಿದ್ದುಪಡಿಗೆ ತಾತ್ಕಾಲಿಕ ಆಧಾರ್ ಕೇಂದ್ರವನ್ನು ಸ್ಥಾಪಿಸಲು ಸಮಿತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸದ್ಯದಲ್ಲಿಯೇ ಈ ಹೋಬಳಿ ಕೇಂದ್ರಗಳಲ್ಲಿ ಕೆಲವು ದಿನಗಳ ಮಟ್ಟಿಗೆ ಆಧಾರ್ ಕೇಂದ್ರ ಸ್ಥಾಪಿಸಲಾಗುವದು. ಹೆಚ್ಚಿನ ಜನರಿಗೆ ಆಧಾರ್ ಕಾರ್ಡ್ ಮಾಡಿಸುವ ಅವಶ್ಯಕತೆ ಕಂಡುಬಂದಲ್ಲಿ ಈ ಸೇವೆಯನ್ನು ಮತ್ತಷ್ಟು ದಿನಗಳು ವಿಸ್ತರಿಸಲಾಗುವದು. ದಿನಾಂಕ ನಿಗದಿಪಡಿಸಿ ಈ ಬಗ್ಗೆ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಮಾಹಿತಿ ನೀಡಲಾಗುವದು ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಕಾರ್ಯಾಧ್ಯಕ್ಷ ಬಾಚೀರ ಎಸ್. ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಖಜಾಂಚಿ ಅಜ್ಜಿಕುಟ್ಟೀರ ಎನ್. ಸುಬ್ರಮಣಿ, ನಿರ್ದೇಶಕರುಗಳಾದ ಚೊಟ್ಟೆಯಂಡಮಾಡ ವಿಶ್ವನಾಥ್, ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ ಹಾಜರಿದ್ದರು.

ಉನ್ನತ ತನಿಖೆಗೆ ಮನವಿ

ಅಕ್ರಮ ಮತ್ತು ಕಳಪೆ ಕಾಳುಮೆಣಸು ಆಮದುವಿನಿಂದ ತೀವ್ರ ಬೆಲೆ ಕುಸಿತಕ್ಕೆ ತುತ್ತಾಗಿದ್ದು, ಕಾಳುಮೆಣಸು ಆಮದನ್ನು ತಕ್ಷಣದಿಂದ ತಡೆ ಹಿಡಿಯಬೇಕು ಮತ್ತು ಅಕ್ರಮ ಕಾಳುಮೆಣಸು ಆಮದು ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಗು ಬೆಳೆಗಾರರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.

ಕಳೆದ ಎರಡು ಮೂರು ವರ್ಷದಿಂದ ವಿಯೇಟ್ನಾಂ ದೇಶ ಸೇರಿದಂತೆ ಇತರ ಹಲವು ದೇಶದಿಂದ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿದ್ದು, ಇದರಿಂದ ರೂ. 730 (ಕೆಜಿಗೆ) ಇದ್ದ ದರ 300 ರೂ.ಗೆ ಕುಸಿದಿದೆ. ಇದಲ್ಲದೆ ಕಳಪೆ ಗುಣಮಟ್ಟದ ಕಾಫಿ ಸಹ ಆಮದಾಗುತ್ತಿದ್ದು, ಉತ್ತಮ ಗುಣಮಟ್ಟದ ಕಾಳುಮೆಣಸು ಮತ್ತು ಕಾಫಿಯ ದರ ಕುಸಿಯುವಂತಾಗಿದೆ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಮನವಿಯಲ್ಲಿ ಗಮನ ಸೆಳೆಯಲಾಗಿದೆ.