ಸಿದ್ದಾಪುರ, ಸೆ. 20: ಜೀಪು ಹಾಗೂ ಸಾರಿಗೆ ಬಸ್ಸು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕ ಸೇರಿ ಜೀಪಿನಲ್ಲಿದ್ದ ಈರ್ವರೂ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಹುಂಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. (ಮೊದಲ ಪುಟದಿಂದ) ಸಿದ್ದಾಪುರದಿಂದ ಪಾಲಿಬೆಟ್ಟಕ್ಕೆ ಹುಂಡಿ ಮಾರ್ಗವಾಗಿ ತೆರಳುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆ ಬಸ್ಸು ಹಾಗೂ ತಿತಿಮತಿಯಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಗೂಡ್ಸ್ ಜೀಪ್ ನಡುವೆ ಹುಂಡಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಜೀಪಿನಲ್ಲಿದ್ದ ಚಾಲಕ ಜನಾರ್ದನ ಹಾಗೂ ಕಾರ್ಮಿಕ ಮಣಿರವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ .ಎರಡು ವಾಹನಗಳು ಜಖಂಗೊಂಡಿದ್ದು, ಘಟನೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.