ಸಂಪಾಜೆ, ಸೆ. 16: ಸಂಪಾಜೆಯ ಅಜಾತ ಶತ್ರು, ಯುವ ನಾಯಕ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿಯ ಹಂತಕರಿಗೆ ಸಾಮೂಹಿಕ ಬಹಿಷ್ಕಾರ ಮತ್ತು ಕಳಗಿ ಹತ್ಯೆಯ ಬಗ್ಗೆ ಸಂಪೂರ್ಣ ತನಿಖೆ ಹಾಗೂ ಸಮಾಜ ಘಾತಕ ಘಟನೆ ನಡೆಯದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾ.30 ರಂದು ಕಾಲ್ನಡಿಗೆ ಜಾಥಾವನ್ನು ಸಂಪಾಜೆಯಿಂದ ಕೊಯನಾಡು ತನಕ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಜಾಥಾದಲ್ಲಿ ಸಮಸ್ತ ಸಂಪಾಜೆಯ ಗ್ರಾಮಸ್ಥರು, ದ.ಕ. ಸಂಪಾಜೆ, ಅರಂತೋಡು, ಪೆರಾಜೆ, ಚೆಂಬು, ಮದೆನಾಡು ಹಾಗೂ ವಿವಿಧ ಕಡೆಗಳಿಂದ ಸುಮಾರು 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಈ ಕುರಿತು ಪೂರ್ವಭಾವಿ ಸಭೆ ತಾ. 14 ರಂದು ಶ್ರೀ ಗಣೇಶ ಕಲಾಮಂದಿರ ಕೊಯನಾಡುವಿನಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಮಾಜ ಘಾತಕ ಶಕ್ತಿಗಳನ್ನು ಬಹಿಷ್ಕರಿಸುವ ಸಲುವಾಗಿ ಆಯೋಜಿಸಿದ ಜನಜಾಗೃತಿ ಜಾಥಾದ ಬಗ್ಗೆ ವಿವರ ನೀಡಿದರು. ಸಂಪಾಜೆಯ ಪ್ರಮುಖರಾದ ರಾಜಾರಾಮ್ ಕಳಗಿ, ಬಾಲಕೃಷ್ಣ ನೆಡ್ಚಿಲ್, ಜಗದೀಶ್ ಕೆದಂಬಾಡಿ, ಓ.ಆರ್. ಮಾಯಿಲಪ್ಪ, ಬಿ.ಜೆ.ಯಶೋಧರ, ರವೀಂದ್ರ ಯು.ಪಿ. ಲೋಕಯ್ಯ ನಡುಬೆಟ್ಟು, ಉಲ್ಲಾಸ ಕೇನಾಜೆ, ಸುಂದರ ಬಿಸಿಲುಮನೆ, ಕಾಸ್ಪಾಡಿ ಹೊನ್ನಪ್ಪ, ಕಿಶನ್ ಕಲ್ಲಾಳ, ಚಂದ್ರಶೇಖರ್ ದೇವರಗುಂಡ, ಜಗದೀಶ್ ಪರ್ಮಲೆ ಮತ್ತಿತರರು ಭಾಗವಹಿಸಿದ್ದರು. -ಶಭರೀಶ್