ಕೂಡಿಗೆ, ಸೆ. 17 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಕೂಡಿಗೆ ಡಯಟ್ ಕ್ರೀಡಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ದಸರಾಕ್ಕೆ ತನ್ನದೇ ಆದ ಮಹತ್ವವಿದ್ದು, ಇದರ ಅಂಗವಾಗಿ ನಡೆಯುವ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಕೊಡಗು ಜಿಲ್ಲೆಯು ಕ್ರೀಡೆಯ ತವರೂರಾಗಿದ್ದು, ಇನ್ನು ಹೆಚ್ಚು ಕ್ರೀಡಾಪಟುಗಳು ಕ್ರೀಡೆಗಳಲ್ಲಿ ತೊಡಗಿ ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಬೇಕು ಎಂದರು. (ಮೊದಲ ಪುಟದಿಂದ) ಜಿ.ಪಂ ಸದಸ್ಯೆ ಕೆ.ಆರ್.ಮಂಜುಳಾ ಮಾತನಾಡಿ, ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ಕ್ರೀಡಾಕೂಟಗಳಿಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ಸಹಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹಕ್ಕೆ ಪ್ರಯತ್ನಿಸಲಾಗುವದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ವಹಿಸಿದ್ದರು.
ವೇದಿಕೆಯಲ್ಲಿ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ಸುಂಟಿಕೊಪ್ಪ ಗ್ರಾ.ಪಂ ಸದಸ್ಯೆ ಗಿರಿಜ, ಕ್ರೀಡಾ ತರಬೇತುದಾರರಾದ ಅಂತೋಣಿ ಡಿಸೋಜ, ವೆಂಕಟೇಶ್ ಸೇರಿದಂತೆ ವಿವಿಧ ಕ್ರೀಡೆಗಳ ತರಬೇತುದಾರರರು ಇದ್ದರು. ತಾಲೂಕು ಮಟ್ಟದ ಗುಂಪು ಕ್ರೀಡಾಕೂಟಗಳು ಮತ್ತು ಅಥ್ಲೆಟಿಕ್ ಕ್ರೀಡಾಕೂಟಗಳು ಕ್ರೀಡಶಾಲೆ ಮತ್ತು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆದವು.