ಪೊನ್ನಂಪೇಟೆ, ಸೆ. 15: ನಿರಂತರವಾಗಿ ಕಾಡಾನೆಗಳ ಉಪಟಳದಿಂದ ತತ್ತರಿಸಿರುವ ಮಾಯಮುಡಿ ಗ್ರಾಮಸ್ಥರು ಇದೀಗ ಹುಲಿಯ ಭಯವನ್ನು ಎದುರಿಸುವಂತಾಗಿದೆ. ಕಳೆದ ಎರಡು ದಿನಗಳ ಹಿಂದೆ ಗ್ರಾಮ ವ್ಯಾಪ್ತಿಯಲ್ಲಿ ಹುಲಿಯೊಂದು ಸಂಚರಿಸುವದು ಬೆಳಕಿಗೆ ಬಂದಿದೆ. ಮಾಯಮುಡಿ ವ್ಯಾಪ್ತಿಯ ಧನುಗಾಲ, ಬೆಮ್ಮತ್ತಿ ಮೊದಲಾದೆಡೆ ಹುಲಿಯ ಹೆಜ್ಜೆ ಗುರುತು ಗೋಚರಿಸಿದೆ. ಇದು ಗ್ರಾಮಸ್ಥರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.ಗ್ರಾಮದಲ್ಲಿ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡ ಬೆನ್ನಲ್ಲೆ ಗ್ರಾಮಸ್ಥರ ಆತಂಕ ಹೆಚ್ಚಾಗಿದೆ. ಸುದ್ದಿ ಕೇಳಿ ಭಯಭೀತರಾಗಿರುವ ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುವಂತಾಗಿದೆ. ಕಾರ್ಮಿಕರು ತೋಟ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ.ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದೆ. ಈ ಮೊದಲೇ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗ್ರಾಮದ ಕೃಷಿ ಧನುಗಾಲ ಗ್ರಾಮ ವ್ಯಾಪ್ತಿಯ ತಮ್ಮ ತೋಟದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಈ ಮೊದಲು ಕೂಡ ಹುಲಿ ಈ ಭಾಗದಲ್ಲಿ ಸಂಚರಿಸಿದೆ ಎಂದು ಬೆಮ್ಮತ್ತಿ ಎಸ್ಟೇಟಿನ ಮಾಲೀಕ ಕೆ.ಎಂ. ಅಬ್ದುಲ್ ರಹಮಾನ್ ‘ಶಕ್ತಿ’ಗೆ ತಿಳಿಸಿದ್ದಾರೆ. ಗ್ರಾಮದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾದ ಸುದ್ದಿಯ ಹಿನ್ನೆಲೆಯಲ್ಲಿ ಯಾವದೇ ತೋಟ ಕಾರ್ಮಿಕರು ಕಾಫಿ ತೋಟದತ್ತ ಮುಖ ಹಾಕುತ್ತಿಲ್ಲ. ಹುಲಿಯ ಸಂಚಾರ ಸಹಜವಾಗಿಯೇ ಕಾರ್ಮಿಕರಲ್ಲಿ ಜೀವಭಯ ಮೂಡಿಸುತ್ತದೆ. ನಮಗೂ ತೋಟಕ್ಕೆ ತೆರಳಲು ಭಯವಾಗುತ್ತದೆ ಎಂದು ಹೇಳಿದ್ದಾರೆ.

ಈ ಭಾಗದ ಹಲವೆಡೆ ಹುಲಿಯ ಹೆಜ್ಜೆಗುರುತು ಕಾಣಿಸಿಕೊಂಡರು ಇದುವರೆಗೂ ಅರಣ್ಯ ಇಲಾಖೆ ಗಮನಹರಿಸದಿರುವದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮಸ್ಥರ ಆತಂಕವನ್ನು ದೂರ ಮಾಡಲು ಕ್ರಮ ಕೈಗೊಳ್ಳಬೇಕು. ಹುಲಿ ಇದೇ ಭಾಗದಲ್ಲಿ ಮತ್ತೆ ಸುಳಿದಾಡುತ್ತಿರುವದನ್ನು ಖಚಿತಪಡಿಸಿಕೊಂಡು ಬೋನನ್ನು ಅಳವಡಿಸಿ ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂಬದು ಗ್ರಾಮಸ್ಥರ ಒತ್ತಾಯವಾಗಿದೆ.

ಚಿತ್ರ, ವರದಿ: ರಫೀಕ್ ತೂಚಮಕೇರಿ