ಮಡಿಕೇರಿ, ಸೆ. 15: ಭಾರತೀಯ ಜನತಾಪಕ್ಷ (ಬಿಜೆಪಿ)ದಲ್ಲಿ ಇದೀಗ ಪಕ್ಷದ ಆಂತರಿಕ ಚುನಾವಣೆಯೊಂದಿಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಪಕ್ಷದಲ್ಲಿ ಮಿಂಚಿನ ಸಂಚಾರ ಆರಂಭಗೊಂಡಿದೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆಯನ್ನೂ ಏರಿರುವದರಿಂದ ಈ ಬಾರಿಯ ಚುನಾವಣೆ ರಂಗೇರುತ್ತಿದ್ದು; ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚಾಗುತ್ತಿದೆ. ಸ್ಥಾನಾಕಾಂಕ್ಷಿಗಳು ತೆರೆಮರೆಯಲ್ಲಿ ತಮ್ಮ ರಾಜಕೀಯ ಕಸರತ್ತು ನಡೆಸುತ್ತಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.ಪ್ರತಿ ಮೂರು ವರ್ಷಕ್ಕೊಮ್ಮೆ ಬಿಜೆಪಿ ಪಕ್ಷದ ನಿಯಮದಂತೆ ಪಕ್ಷದ ವಿವಿಧ ಘಟಕಗಳಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿದ್ದು, ಇದೀಗ ಹಾಲಿ ಇರುವ ಪದಾಧಿಕಾರಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ರಚಿಸಿಕೊಂಡಿರುವ ಸಿದ್ಧಾಂತದಂತೆ ಆಯ್ಕೆ ಪ್ರಕ್ರಿಯೆಗಳು ಮುಗಿಯಬೇಕಿದ್ದು, ಈಗಾಗಲೇ ಇದಕ್ಕೆ ಚಾಲನೆ ದೊರೆತಿದೆ. ತಳಮಟ್ಟದ ಅಧಿಕಾರ ಸ್ಥಾನದ ಆಯ್ಕೆಯೊಂದಿಗೆ ಅಂತಿಮವಾಗಿ ಪಕ್ಷದ ಜಿಲ್ಲಾ ಅಧ್ಯಕ್ಷರ ಆಯ್ಕೆಯೂ ಜರುಗಬೇಕಿದ್ದು, ಬಿಜೆಪಿ ಪಾಳಯದಲ್ಲಿ ಚುನಾವಣೆಯ ಬಿಸಿ ಆರಂಭಗೊಂಡಿದೆ,ಈಗಾಗಲೇ ಪಕ್ಷದ ಆಂತರಿಕ ಚುನಾವಣೆಯ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಸದಸ್ಯತ್ವ ಅಭಿಯಾನವೂ ಕೂಡ ಇದರೊಂದಿಗೆ ಜರುಗುತ್ತಿದ್ದು, ನವೆಂಬರ್ 30ರ ಒಳಗೆ ನೂತನ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯೂ ಮುಕ್ತಾಯಗೊಳ್ಳಬೇಕಿದೆ ಎಂದು ತಿಳಿದು ಬಂದಿದೆ. ಸದ್ಯದ ಮಟ್ಟಿಗೆ ಆನ್‍ಲೈನ್ ಮೂಲಕ ಸದಸ್ಯತ್ವ ಆಂದೋಲನದೊಂದಿಗೆ, ಸೆಪ್ಟೆಂಬರ್ 10 ರಿಂದ ಬೂತ್‍ಮಟ್ಟದ ಸಮಿತಿ ರಚನೆಯ ಪ್ರಕ್ರಿಯೆ ನಡೆಯುತ್ತಿದೆ. ಆಂತರಿಕ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಿಂದ ಇದಕ್ಕಾಗಿ ಚುನಾವಣಾಧಿಕಾರಿಗಳನ್ನೂ ನೇಮಕ ಮಾಡಲಾಗಿದೆ.

ಸೆ. 10 ರಿಂದ 30ರ ಅವಧಿಯಲ್ಲಿ ಬೂತ್ ಸಮಿತಿ ರಚನೆ ನಡೆಯಲಿದ್ದು, ಇದು ಈ ಅವಧಿಯಲ್ಲಿ ಮುಕ್ತಾಯ ಗೊಳ್ಳಬೇಕಿದೆ. ಬೂತ್‍ಮಟ್ಟದ ಸಮಿತಿ ರಚನೆಯ ನಂತರ ಮಂಡಲ ಸಮಿತಿ ರಚನೆಯಾಗಬೇಕಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಮಡಿಕೇರಿ ನಗರ, ಮಡಿಕೇರಿ ಗ್ರಾಮಾಂತರ, ಸೋಮವಾರಪೇಟೆ ಹಾಗೂ ವೀರಾಜಪೇಟೆ ಮಂಡಲ ಸಮಿತಿಗಳನ್ನು ಹೊಂದಿದೆ. ಈ ಮಂಡಲ ಸಮಿತಿಗೆ ಅಕ್ಟೋಬರ್ 10 ರಿಂದ 30ರ ಅವಧಿಯಲ್ಲಿ ಪದಾಧಿಕಾರಿಗಳ ನೇಮಕವಾಗ ಬೇಕಿದ್ದು, ಇದಕ್ಕೂ ಈಗಾಗಲೇ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದಾದ ಬಳಿಕ ನವೆಂಬರ್ 20 ರಿಂದ 30ರ ಅವಧಿಯೊಳಗೆ ಇಡೀ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೆ ನೂತನ ಜಿಲ್ಲಾ ಅಧ್ಯಕ್ಷರು ಸೇರಿದಂತೆ ಇತರ ಪದಾಧಿಕಾರಿಗಳ ಆಯ್ಕೆಯೊಂದಿಗೆ ಜಿಲ್ಲಾ ಸಮಿತಿ ರಚನೆ ಪ್ರಕ್ರಿಯೆಯೂ ಪೂರ್ಣಗೊಳ್ಳಬೇಕಾಗಿದೆ. ಜಿಲ್ಲಾ ಸಮಿತಿ ರಚನೆ ಪೂರ್ಣಗೊಂಡ ಬಳಿಕ ರಾಜ್ಯ ಸಮಿತಿ ರಚನೆಯಾಗಬೇಕಿದ್ದು, ಸದ್ಯದ ಮಟ್ಟಿಗೆ ಪಕ್ಷದ ಹೈಕಮಾಂಡ್ ಈಗಾಗಲೇ ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನಳಿನ್‍ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿರುವದರಿಂದ ಇನ್ನಿತರ ಪದಾಧಿಕಾರಿಗಳ ಆಯ್ಕೆ ನಡೆಯಬೇಕಾಗಿದೆ.

ಜಿಲ್ಲಾಧ್ಯಕ್ಷ ಸ್ಥಾನಾಕಾಂಕ್ಷಿಗಳು

ಕಳೆದ ಮೂರು ವರ್ಷಗಳ ಹಿಂದೆ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು ನೇಮಕಗೊಂಡಿದ್ದರು. ಪ್ರಬಲ ಪೈಪೋಟಿ, ರಾಜಕೀಯ ಚಟುವಟಿಕೆಗಳ ನಡುವೆ ಮನುಮುತ್ತಪ್ಪ ಅಧ್ಯಕ್ಷ ಸ್ಥಾನಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಪಕ್ಷದೊಳಗಿನ ಕೆಲವಾರು ಆಂತರಿಕ ಬಿನ್ನಾಭಿಪ್ರಾಯಗಳು ಬಳಿಕ ಸ್ಫೋಟಗೊಂಡು ಬೆಂಗಳೂರು ಮಟ್ಟದಲ್ಲಿ ನಡೆದ ಬೆಳವಣಿಗೆಯಂತೆ ಮನುಮುತ್ತಪ್ಪ ಅವರು ಈ ಸ್ಥಾನದಿಂದ ಪದಚ್ಯುತರಾಗಿದ್ದರು.

ತೆರವಾದ ಸ್ಥಾನಕ್ಕೆ ಯುವಕ ಬಿ.ಬಿ. ಭಾರತೀಶ್ ಅವರನ್ನು ವರಿಷ್ಠರು ನೇಮಕ ಮಾಡಿದ್ದರು. ಬಳಿಕ ಹಲವು ಒತ್ತಡಗಳಂತೆ ಮನು ಮುತ್ತಪ್ಪ ರಾಜ್ಯ ಸಮಿತಿಗೆ ನಿಯೋಜಿ ತರಾಗಿದ್ದನ್ನು ಸ್ಮರಿಸಬಹುದಾಗಿದೆ. ಇದೀಗ ಈ

(ಮೊದಲ ಪುಟದಿಂದ) ಅವಧಿಯ ಅಧಿಕಾರ ಪೂರ್ಣಗೊಳ್ಳಲಿದ್ದು, ನೂತನ ಸಮಿತಿ ರಚನೆಯಾಗಬೇಕಿದೆ.

ಯಾರ್ಯಾರು... ಈ ಬಾರಿ..?

ಪ್ರಸಕ್ತ ಜರುಗಲಿರುವ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವರು ಆಕಾಂಕ್ಷಿಗಳಾಗಿದ್ದು, ತಮ್ಮ ಹಕ್ಕು ಪ್ರತಿಪಾದನೆಯೊಂದಿಗೆ, ರಾಜಕೀಯ ಕಸರತ್ತು ನಡೆಸುತ್ತಿರುವ ಬೆಳವಣಿಗೆ ‘ಶಕ್ತಿ’ಗೆ ತಿಳಿದು ಬಂದಿದೆ.

ಪತ್ರಿಕೆಗೆ ಕೆಲವು ಮೂಲಗಳಿಂದ ತಿಳಿದು ಬಂದಂತೆ, ಈ ಬಾರಿ ಪಕ್ಷದ ಮುಖಂಡರುಗಳಾದ ಎಂ.ಬಿ. ದೇವಯ್ಯ, ಶಾಂತೆಯಂಡ ರವಿಕುಶಾಲಪ್ಪ, ನಾಗೇಶ್ ಕುಂದಲ್ಪಾಡಿ, ರಾಬಿನ್‍ದೇವಯ್ಯ, ಕಳೆದ ಅವಧಿಯಲ್ಲಿ ನಾಮನಿರ್ದೇಶಿತರಾಗಿದ್ದ ಹಾಲಿ ಅಧ್ಯಕ್ಷ ಬಿ.ಬಿ. ಭಾರತೀಶ್, ನಂದಿನೆರವಂಡ ರವಿಬಸಪ್ಪ, ಬೆಲ್ಲುಸೋಮಯ್ಯ, ಕುಂಞಂಗಡ ಅರುಣ್ ಭೀಮಯ್ಯ ಅವರುಗಳ ಹೆಸರು ಕೇಳಿ ಬಂದಿದೆ. ಈ ಪಟ್ಟಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಇದರೊಂದಿಗೆ ಈ ಬಾರಿ ಸಂಘ ಪರಿವಾರದ ಪಾತ್ರವೂ ಮಹತ್ವ ಬೀರಲಿದೆ ಎನ್ನಲಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಜಿಲ್ಲಾ ಅಧ್ಯಕ್ಷ ಸ್ಥಾನ ಹೆಚ್ಚು ಪ್ರತಿಷ್ಠೆಯಾಗಲಿದ್ದು, ಬಿಜೆಪಿಯ ಆಂತರಿಕ ಚುನಾವಣಾ ಪ್ರಕ್ರಿಯೆಯ ಕಾವು ಕುತೂಹಲ ಮೂಡಿಸುತ್ತಿದೆ.

- ಶಶಿ ಸೋಮಯ್ಯ