ಗೋಣಿಕೊಪ್ಪಲು, ಸೆ. 15: ಒನ್ ವೇ ಮಾರ್ಗ, ಗಾಂಜಾ ಮಾರಾಟ, ವಿಪರೀತ ವೇಗದಲ್ಲಿ ವಾಹನ ಚಾಲನೆ, ಕರ್ಕಸ ಶಬ್ದ, ಬಸ್ ತಂಗುದಾಣದಲ್ಲಿ ಮದ್ಯ ವ್ಯಸನಿಗಳ ಕಾಟ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸಮ್ಮುಖದಲ್ಲಿ ಸೌಹಾರ್ದ ಸಭೆಯು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ನಡೆಯಿತು.
ವೃತ್ತ ನೀರಿಕ್ಷಕ ದಿವಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಚಾರ ವಿನಿಮಯ ನಡೆಸಲಾಯಿತು.
ನೂತನವಾಗಿ ಗೋಣಿಕೊಪ್ಪ ಠಾಣಾಧಿಕಾರಿಯಾಗಿ ಆಗಮಿಸಿರುವ ಸುರೇಶ್ ಬೋಪಣ್ಣ ಮಾತನಾಡಿ, ಒನ್ ವೇ ಮಾರ್ಗ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ, ಗಾಂಜಾ ಮಾರಾಟ ಕಂಡು ಬಂದಲ್ಲಿ ಪೊಲೀಸರಿಗೆ ಗುಪ್ತ ಮಾಹಿತಿ ನೀಡುವಂತೆ ಮನವಿ ಮಾಡಿದರು. ನಾಮಫಲಕ ಅಳವಡಿಸಿದ ಪ್ರದೇಶದಲ್ಲಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಜನತೆಯ ಕಷ್ಟಗಳಿಗೆ ಪೊಲೀಸ್ ಇಲಾಖೆ ಸದಾ ಸ್ಪಂದಿಸಲಿದೆ ಎಂದರು. ಅಪರಾಧ ವಿಭಾಗ ಠಾಣಾದಿಕಾರಿ ಅರ್. ಮಂಚಯ್ಯ ಮಾತನಾಡಿ, ಹಲವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೆಮಾಡ ಸುನೀಲ್ ಮಾದಪ್ಪ ಮಾತನಾಡಿ ಕಾಲೇಜು ವಿದ್ಯಾರ್ಥಿಗಳು ವೇಗವಾಗಿ ಬೈಕ್ ರೈಡ್ ಮಾಡುವದು ನಿಲ್ಲಬೇಕು. ನಿಗದಿತ ಸ್ಥಳದಲ್ಲೇ ವಾಹನ ನಿಲುಗಡೆ ಆಗಬೇಕು ಎಂದರು. ಹಿರಿಯ ಉದ್ಯಾಮಿ ಅಜಿತ್ ಐಯ್ಯಪ್ಪ ಮಾತನಾಡಿ, ದ್ವಿಚಕ್ರ ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ವೃತ್ತ ನೀರಿಕ್ಷಕ ದಿವಾಕರ್ ಮಾತನಾಡಿ, ಜನತೆಗೆ ಯಾವದೇ ತೊಂದರೆ ಇದ್ದಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ಆಟೋ ಚಾಲಕ ಸಂಘದ ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಕೃಷ್ಣ, ಪ್ರಮೋದ್ ಗಣಪತಿ, ಮಂಜು ರೈ, ಜೆ.ಕೆ. ಸೋಮಣ್ಣ, ರತಿ ಅಚ್ಚಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಪರಶುರಾಮ, ಚಿಣ್ಣಪ್ಪ, ಅಬ್ದುಲ್ ಸಮ್ಮದ್, ಸುಬ್ರಮಣ್ಯ, ಎ.ಜೆ. ಬಾಪು, ತೆಕ್ಕಡ ಕಾಶಿ, ಕೇಳಪಂಡ ಸುದೀರ್, ಹಾತೂರು ಪಂಚಾಯಿತಿ ಸದಸ್ಯರಾದ ಗುಮ್ಮಟ್ಟಿರ ದರ್ಶನ್, ಚಿಣ್ಣಪ್ಪ, ಪೊಲೀಸ್ ಸಿಬ್ಬಂದಿಗಳಾದ ಮನು, ಶೇಖರ್, ಅನೀಫ್ ಹಾಜರಿದ್ದರು. ಸಿಬ್ಬಂದಿ ಪೂವಣ್ಣ ಸ್ವಾಗತಿಸಿ, ವಂದಿಸಿದರು.