ವೀರಾಜಪೇಟೆ, ಸೆ. 15: ನಗರದಲ್ಲಿ ಕೆಲವು ದಿನಗಳ ಹಿಂದೆ ಬೃಹತ್ ತಡೆಗೋಡೆಯೊಂದು ಕುಸಿದು ಮನೆಗಳಿಗೆ ಹಾನಿಯಾಗಿದ್ದು, ತಡೆಗೋಡೆಯ ಸನಿಹದಲ್ಲಿರುವ ನಿವಾಸಿಗಳು ಪರಿಹಾರ ಕೇಂದ್ರದಲ್ಲಿ ತಂಗಲು ಅನುವು ಮಾಡಿಕೊಂಡು ವಂತೆ ಜಿಲ್ಲಾಡಳಿತವನ್ನು ಒತ್ತಾಯ ಮಾಡಿದ್ದಾರೆ.
ವೀರಾಜಪೇಟೆ ನಗರದ ಮೊಗರಗಲ್ಲಿ ನೆಹರು ನಗರದ ವಾರ್ಡ್ 7 ರಲ್ಲಿ ಬೃಹತ್ ತಡೆಗೋಡೆಯು ಭಾರೀ ಮಳೆಯ ಕಾರಣ ಕುಸಿದು ಬಿದ್ದಿತ್ತು. ಪರಿಣಾಮ ಅಂಚಿನಲ್ಲಿದ್ದ ಮನೆಗಳಿಗೆ ಹಾನಿಯಾಗಿತ್ತು. ಬೃಹತ್ ತಡೆಗೋಡೆಯ ಅಸುಪಾಸಿನಲ್ಲಿ 20-30 ಮನೆಗಳಿದ್ದು, ಸನಿಹದಲ್ಲೇ ರಾಜಕಾಲುವೆಯೂ ಹರಿಯುತ್ತಿದೆ. ಅಂಚಿನಲ್ಲಿ ಮತ್ತು ತಡೆಗೋಡೆಯ ಮೇಲ್ಬಾಗದಲ್ಲಿಯೂ ಮನೆಗಳ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ನೆಲಸಿರುವ ಬಹುತೇಕ ಮಂದಿ ಕೂಲಿ ಅವಲಂಭಿತರಾಗಿದ್ದು, ಜೀವನವು ದುಸ್ತರವಾಗಿದೆ. ಕುಸಿದ ತಡೆಗೋಡೆ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ತಾಲೂಕು ದಂಡಾಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದು, ಇಲ್ಲಿನ ನಿವಾಸಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಇತರ ಸ್ಥಳಗಳಿಗೆ ತೆರಳಲು ಸೂಚನೆ ನೀಡಿದ್ದು, ಮನೆ ಬಾಡಿಗೆ ಹಣವನ್ನು ನೀಡುವದಾಗಿ ತಿಳಿಸಿದ್ದಾರೆ.
ಒಂದು-ಎರಡು ದಿನದ ಮಟ್ಟಿಗೆ ಇತರ ನಿವಾಸಗಳಲ್ಲಿ ತಂಗಬಹುದು. ಆದರೆ ದಿನನಿತ್ಯ ತಂಗಲು ಹೇಗೆ ಸಾಧ್ಯ. ಸರ್ಕಾರ ತಕ್ಷಣವೇ ಸ್ಪಂದಿಸಿ ಸೂಕ್ತ ಸ್ಥಳವನ್ನು ಗುರುತಿಸಿ ತಂಗಲು ಪರಿಹಾರ ಕೇಂದ್ರವನ್ನು ಸ್ಥಾಪಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದು ಇಲ್ಲಿನ ನಿವಾಸಿಗಳು ಪತ್ರಿಕೆಗೆ ಹೇಳಿಕೆ ನೀಡಿದರು.
ನಾವುಗಳು ಸುಮಾರು ಮೂವತ್ತು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ಕೆಲವು ದಿನಗಳ ಹಿಂದೆ ಬಿದ್ದ ಭಾರೀ ಮಳೆಯ ಕಾರಣ ತಡೆಗೋಡೆಯು ಕುಸಿಯಿತು. ವಾಸ ಮಾಡುವ ಮನೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ದಿನ ಕಳೆಯಲು ಕಷ್ಟಸಾಧ್ಯವಾಗಿದೆ. ಸ್ಥಳೀಯ ಆಡಳಿತವು ಪರಿಹಾರ ಕೇಂದ್ರ ತೆರೆದು ನಮಗಳಿಗೆ ತಂಗಲು ಅನುವು ಮಾಡಿಕೊಡಬೇಕು ಎಂದು ಶಾಜೀದ ವಿ. ಬಶೀರ್ ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಮಾತನಾಡಿ, ಇಲ್ಲಿನ ಸ್ಥಿತಿಯು ಗಂಭೀರವಾದ ಸಮಸ್ಯೆಯಾಗಿದ್ದು, ನಿವಾಸಿಗಳು ಕೂಲಿ ಅವಲಂಭಿತ ರಾಗಿದ್ದಾರೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಸ್ಥಳಬಿಟ್ಟು ತೆರಳುವಂತೆ ತಿಳಿಸಿದ್ದಾರೆ. ಇವರಿಗೆ ತಂಗಲು ಸೂಕ್ತ ಸ್ಥಳ ನಿಗದಿಗೊಳಿಸದೆ ತೆರಳುವಂತೆ ಅಂದರೆ (ಪರಿಹಾರ ಕೇಂದ್ರ) ತಿಳಿಸಿರುವದು ವಿಪರ್ಯಾಸವಾಗಿದೆ. ಅಪಾಯ ಸಂಭವಿಸುವ ಮೊದಲು ಸಂತ್ರಸ್ತರನ್ನು ಸ್ಥಳಾಂತರಿಸಲು ಬಾರದ ಅಧಿಕಾರಿಗಳು ಸತ್ತಾಗ ಪರಿಹಾರ ಕೊಡಲು ಬರುತ್ತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಕೆ. ಪುರಂದರ ಅಭಿಪ್ರಾಯ ವ್ಯಕ್ತಪಡಿಸಿ ಮೊಗರಗಲ್ಲಿಯ ತಡೆಗೋಡೆ ಕುಸಿದ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳದ ವರದಿಯನ್ನು ಪಡೆದಿದ್ದೇನೆ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ತಡೆಗೋಡೆಯ ಸಮೀಪದಲ್ಲಿರುವ ನಿವಾಸಿಗಳಿಗೆ ಇತರೆಡೆಗಳಿಗೆ ತೆರಳಲು ತಿಳಿಸಲಾಗಿದೆ. ಪರಿಹಾರ ಕೇಂದ್ರ ಸ್ಥಾಪನೆ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪರಿಹಾರದ ಬಗ್ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿಸಲಾಗಿದೆ ಅವರು ನೀಡುವ ವರದಿಯ ಆಧಾರಿತವಾಗಿ ಪರಿಹಾರ ಧನವನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ತಡೆಗೋಡೆ ಕುಸಿದ ಕಾರಣದಿಂದಾಗಿ ಇಲ್ಲಿನ ನಿವಾಸಿಗಳು ಆತಂಕದಿಂದ ದಿನಕಳೆಯು ವಂತಾಗಿದ್ದು, ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿತ ತಂಗಲು ತಾತ್ಕಾಲಿಕ ಪರಿಹಾರವನ್ನು ಅತೀ ಶೀಘ್ರದಲ್ಲಿ ಮಾಡಿಕೊಡುವಂತೆ ಮೊಗರಗಲ್ಲಿ ನಿವಾಸಿಗಳು ಆಗ್ರಹಪಡಿಸಿದ್ದಾರೆ ಎಂದರು.