ಕುಶಾಲನಗರ, ಸೆ. 15: ಸಾಕಾನೆ ಶಿಬಿರಗಳಲ್ಲಿರುವ ಆನೆ ಮಾವುತ, ಕಾವಾಡಿಗಳ ಬಹು ದಿನಗಳ ಬೇಡಿಕೆ ಈಡೇರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಬುಡಕಟ್ಟು ಕೃಷಿಕರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಆರ್.ಕೆ. ಚಂದ್ರ ಆರೋಪಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರ, ಹಾಡಿಗಳಲ್ಲಿ ಆದಿವಾಸಿಗಳಿಗೆ ಮೂಲಭೂತ ಸವಲತ್ತುಗಳನ್ನು ಅರಣ್ಯ ಇಲಾಖೆ ಕಡೆಗಣಿಸಿದೆ. ಮೈಸೂರು ದಸರಾ ಅವಧಿಯಲ್ಲಿ ಮಾತ್ರ 1 ತಿಂಗಳ ಕಾಲ ಆನೆಗಳೊಂದಿಗೆ ತೆರಳಿದ ಮಾವುತ, ಕಾವಾಡಿಗರ ಕುಟುಂಬ ಸದಸ್ಯರಿಗೆ ರಾಜ ಮರ್ಯಾದೆ ನೀಡುವ ತೋರಿಕೆ ಎಂದಿದ್ದಾರೆ. ಕೇವಲ ಮಾಧ್ಯಮ ಪ್ರಚಾರಕ್ಕೆ ಮಾತ್ರ ಸೀಮಿತರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಜಿಲ್ಲೆಯ ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿವೆ.