ಮಡಿಕೇರಿ, ಸೆ. 14: ಜ್ಞಾನದ ಕ್ಷೇತ್ರ ನೂತನ ಸಂಶೋಧನೆಗಳಿಗೆ ತನ್ನನ್ನು ತೆರೆದುಕೊಳ್ಳಬೇಕು. ಶಿಕ್ಷಣ ಕ್ರಮದಲ್ಲಿ ಭಾರತೀಯತೆ ಇಲ್ಲ, ಸಂಸ್ಕøತಿಯ ಶ್ರೀಮಂತಿಕೆ ಇಲ್ಲ. ಇದರಿಂದ ಹೊರ ಬಂದು ಶಿಕ್ಷಣ ಕ್ಷೇತ್ರ ಭಾರತೀಯ ಮಾದರಿಯಲ್ಲಿ ಕೆಲಸ ನಿರ್ವಹಿಸು ವಂತಾಗಬೇಕು ಎಂದು ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊಫೆಸರ್ ಪಿ.ವಿ. ಕೃಷ್ಣಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾ. 12 ರಂದು ಮಂಗಳೂರು ವಿಶ್ವವಿದ್ಯಾನಿಲಯದ 40ನೇ ಸಂಸ್ಥಾಪನಾ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀಯುತರು ಶ್ರೀಮಂತ ಪರಂಪರೆ ಹೊಂದಿರುವ ಭಾರತದ ಬಗ್ಗೆ ಇತರರು ಹೆಮ್ಮೆ ಪಡುತ್ತಿದ್ದಾರೆ. ಆದರೆ ಭಾರತದ ವಿಶ್ವವಿದ್ಯಾನಿಲಯಗಳು ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳದೆ ವಿದೇಶಗಳ ಮಾದರಿಯನ್ನು ಅನುಸರಿಸುತ್ತಿರುವದು ವಿಷಾದನೀಯ ಎಂದರು.

ಕಾಲಚಕ್ರ ಹೋದಂತೆ ನಮ್ಮ ಅಂತಸತ್ವವನ್ನು ಗುರುತಿಸಿಕೊಂಡು ಜ್ಞಾನದ ಉಪಯೋಗ ಸಮಾಜದ ಏಳಿಗೆಗೆ ಮಾದರಿಯಾಗುವಂತೆ ಯುವಕರು ಹೊಣೆಗಾರಿಕೆ ಹೊರಬೇಕೆಂದರು. ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನ, ತಂತ್ರಜ್ಞಾನ ಮತ್ತು ಮೌಲ್ಯಗಳುಳ್ಳ ಮೂರು ಅಂಶಗಳು ಅಳವಡಿಕೆಯಾಗಬೇಕೆಂದು ಕೃಷ್ಣಭಟ್ ಅಭಿಪ್ರಾಯಪಟ್ಟರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ಆರ್. ಶೆಟ್ಟಿ ಅವರು ವಿಶೇಷೋಪನ್ಯಾಸ ನೀಡಿ, ವಿಶ್ವವಿದ್ಯಾ ನಿಲಯಗಳಲ್ಲಿ ಅದ್ಯಾಯನದೊಂದಿಗೆ ಆವಿಷ್ಕಾರಗಳು ಇರಬೇಕು. ಜಾಗತಿಕ ಪೈಪೋಟಿಗೆ ನಮ್ಮನ್ನು ತೆರೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಶ್ರಾಂತ ಕುಲಪತಿ ಬಿ. ಹನುಮಯ್ಯ ಅವರು ಕಾಲೇಜುಗಳಲ್ಲಿ ಪೂರ್ಣಪ್ರಮಾಣದ ಉಪನ್ಯಾಸಕರ ನೇಮಕಾತಿ ಬಗ್ಗೆ ಸರಕಾರ ಕ್ರಮಕೈಗೊಳ್ಳಬೇಕು ಎಂದರು. ತಾತ್ಕಾಲಿಕ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ. ಸುಬ್ರಮಣ್ಯ ಯಡಪಡಿತ್ತಾಯ ಅವರು ಮುಂದಿನ 4 ವರ್ಷದ ಅವಧಿಯಲ್ಲಿ ಹಲವು ವಿಭಾಗಗಳಲ್ಲಿ ಬದಲಾವಣೆಗಿಂತ ಪರಿವರ್ತನೆ ತರಲಾಗುವದು ಎಂದರು. ಸಂಸ್ಥೆಯ ಅಭಿವೃದ್ಧಿಗಾಗಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೆತ್ತಿಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಶ್ರೀಯುತರು ಗಮನ ಸೆಳೆದರು.

ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಕುಲಸಚಿವ ಎ.ಎಂ. ಖಾನ್‍ರವರಿಂದ ಸ್ವಾಗತ, ಹಣಕಾಸು ಅಧಿಕಾರಿ ಶ್ರೀಪತಿ ಕಲ್ಲುರಾಯ ಅವರಿಂದ ವಂದನಾರ್ಪಣೆ ನಡೆಯಿತು. ಉಪನ್ಯಾಸಕರಾದ ಪ್ರೊ. ರವಿಶಂಕರ್ ರಾವ್ ಮತ್ತು ಡಾ. ಧನಂಜಯ ಕುಂಬ್ಳೆರವರಿಂದ ಕಾರ್ಯಕ್ರಮ ನಿರೂಪಣೆಗೊಂಡಿತು.

ಇದೇ ಸಂದರ್ಭದಲ್ಲಿ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಹಾಗೂ ಇತರ 5 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.