ಮಡಿಕೇರಿ, ಸೆ. 13: ಮಡಿಕೇರಿ ನಗರದಲ್ಲಿ ಮನುಷ್ಯರಿಗಿಂತ ಬೀದಿ ನಾಯಿಗಳದೇ ಓಡಾಟ ಜೋರು. ಕಾನ್ವೆಂಟ್ ಜಂಕ್ಷನ್‍ನಲ್ಲಿ 20ಕ್ಕೂ ಅಧಿಕ ನಾಯಿಗಳು ಗ್ಯಾಂಗ್ ಕಟ್ಟಿಕೊಂಡು ಆ ವಿಭಾಗವನ್ನು ವಶಪಡಿಸಿ ಕೊಂಡಿವೆ!

ಮೊನ್ನೆ ಇವುಗಳ ವ್ಯಾಪ್ತಿಗೆ ‘ಕಾನೂನು ಬಾಹಿರವಾಗಿ’’ ನುಗ್ಗಿದ ಹಸು ಕರುವನ್ನು ಹಿಗ್ಗಾಮುಗ್ಗ ಬೈದು ಓಡಿಸಿದವು. ಬೆದರಿದ ಕರು ಕಾಲು ಜಾರಿ ತೋಡಿನಲ್ಲಿ ಬಿದ್ದು ನರಳಾಡುತ್ತಿತ್ತು. ಇದನ್ನು ಕಂಡ ದೇಶಪ್ರೇಮಿ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಮತ್ತಿತರರು ವೈದ್ಯ ಚಿದಾನಂದ ಅವರ ನೆರವಿನಲ್ಲಿ ಚಿಕಿತ್ಸೆ ಕೊಡಿಸಿದರು. ಕಾಲು ಮುರಿದುಕೊಂಡ ಕರು ಓಡಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸುಂಟಿಕೊಪ್ಪದ ಗೋಶಾಲೆಗೆ ಆಟೋ ಬಾಡಿಗೆ ಪಾವತಿಸಿ ಅರುಣ್ ಕರುವನ್ನು ಸಾಗಿಸಿ ಮಾನವೀಯತೆ ಮೆರೆದರು.

ಬೀಡುಬಿಟ್ಟ ನಾಯಿಗಳು ಶಾಲೆಗೆ ತೆರಳುವ ಮಕ್ಕಳು, ವಾಕಿಂಗ್ ಬರುವ ಹಿರಿಯ ನಾಗರಿಕರು ಅಥವಾ ಪಾದಚಾರಿಗಳ ಮೇಲೆ ಎಗರಿ ಬೀಳುವ ಮೊದಲು ನಗರಸಭೆ ಕ್ರಮಕೈಗೊಳ್ಳಬೇಕಿದೆ. ನಾಯಿಗಳನ್ನು ಕಾಡಿಗೆ ಬಿಡುವದಾದರೂ, ಅವುಗಳನ್ನು ಹಿಡಿದಾಗ ಮನುಷ್ಯತ್ವ ಇಟ್ಟು ವರ್ತಿಸುವವರನ್ನು ಕರೆಯಿಸುವಂತೆ ನಾಗರಿಕರು ಅಪೇಕ್ಷಿಸಿದ್ದಾರೆ. -ಚಿದ್ದು.