ಸೂರ್ಲಬ್ಬಿ, ಸೆ. 13: ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಜಾಗೃತಿ ಸಂಸ್ಥೆ ಹಾಗೂ ನಾಡಿನ ಗ್ರಾಮಸ್ಥರ ಸಹಕಾರದೊಂದಿಗೆ ಇತ್ತೀಚೆಗೆ ಸೂರ್ಲಬ್ಬಿ ಶಾಲಾ ಮೈದಾನದಲ್ಲಿ ಸುಂಟಿಕೊಪ್ಪ ವಲಯ ಮಟ್ಟದ ಅಂತರ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿದ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಗ್ರಾಮಾಂತರ ಪ್ರದೇಶದಲ್ಲಿ ಉತ್ತಮವಾಗಿ ಸಂಘಟಿಸಿರುವ ಕ್ರೀಡಾಕೂಟದ ಕುರಿತು ಶ್ಲಾಘಿಸಿದರು. ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸೂರ್ಲಬ್ಬಿ ನಾಡಿನ ಅಧ್ಯಕ್ಷ ಮುದ್ದಂಡ ತಿಮ್ಮಯ್ಯ, ಮಕ್ಕಳ ಕ್ರೀಡೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಸುಭಾಷ್‍ಕುಮಾರ್, ಇಂತಹ ಕ್ರೀಡಾಕೂಟಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸಲು ಸಹಕಾರಿಯಾಗಿವೆ ಎಂದರು. ಗ್ರಾ.ಪಂ. ಉಪಾಧ್ಯಕ್ಷ ಸಿ.ಜಿ. ಪಳಂಗಪ್ಪ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಸದಸ್ಯೆ ಟಿ.ಟಿ. ಮಾಯಮ್ಮ ಕ್ರೀಡಾ ಜ್ಯೋತಿ ಬೆಳಗಿಸಿದರು. ಪ್ರೌಢಶಾಲಾ ಪ್ರಬಾರ ಮುಖ್ಯ ಶಿಕ್ಷಕ ವೆಂಕಟೇಶ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾ.ಪಂ. ಸದಸ್ಯೆ ತಂಗಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ಸಂಘದ ತಾಲೂಕು ಘಟಕದ ಅಧ್ಯಕ್ಷ ಡಿ.ಪಿ. ಧರ್ಮಪ್ಪ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎ. ಲಕ್ಷ್ಮಣ್ ಮಾತನಾಡಿದರು.

ಶಾಲೆಯ ಹಳೆಯ ವಿದ್ಯಾರ್ಥಿನಿಯೂ ಆದ ರಾಜ್ಯಮಟ್ಟದ ಅಥ್ಲಿಟ್ ಎನ್.ಬಿ. ರುಕ್ಮಿಣಿ ಪಥಸಂಚಲನದಲ್ಲಿ ಕ್ರೀಡಾ ಜ್ಯೋತಿಯನ್ನು ಹಿಡಿದು ಸಾಗಿದರು. ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಲೀಲಾ, ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಪಿ.ಕೆ. ರವಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬಿ.ಎಂ. ಸುಂದರಿ, ಸಿ.ಆರ್.ಪಿ., ಬಿ.ಎನ್. ವಸಂತ್‍ಕುಮಾರ್, ಜಾಗೃತಿ ಸಂಸ್ಥೆಯ ಪ್ರಮುಖರಾದ ಕಣ್ಣನ್, ಸಂಪತ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ದಿನೇಶ್ ನಾಯ್ಕ್, ಪದಾಧಿಕಾರಿ ನವೀನ್, ಕ್ರೀಡಾ ಸಂಚಾಲಕ ಕೆ.ಸಿ. ಮಂಜುನಾಥ್, ಶಿಕ್ಷಕ ಎಂ.ಟಿ. ಪೂವಯ್ಯ, ಶಿವಣ್ಣ, ಕೃಷ್ಠೇಗೌಡ ಇದ್ದರು.

ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಸ್ವಾಗತಿಸಿದರು. ಶಿಕ್ಷಕ ಕೆ.ಡಿ. ರಜಿತ ನಿರ್ವಹಿಸಿದರು. ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಪಂದ್ಯಾಟಗಳನ್ನು ನಡೆಸಲಾಯಿತು. ಚಿತ್ರ ವರದಿ: ಟಿ.ಜಿ.ಪಿ.