ಪೊನ್ನಂಪೇಟೆ, ಸೆ. 14: ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿಯ ಸಹಯೋಗದಲ್ಲಿ ಗೌರಿ ಗಣೇಶೋತ್ಸವ ವಿಜೃಂಭಣೆಯಿಂದ ನೆರವೇರಿತು. ಶ್ರೀ ಬಸವೇಶ್ವರ ದೇವಸ್ಥಾನ, ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಶಿವ ಕಾಲೋನಿಯ ಶಿವ ಯುವಕರ ಸಂಘ, ಮುಖ್ಯ ರಸ್ತೆಯ ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಮಹಾತ್ಮ ಗಾಂಧಿ ನಗರದ ಯವ ಶಕ್ತಿ ಯುವಕರ ಸಂಘ ಹಾಗೂ ಜೋಡುಬೀಟಿ ನೆಹರು ನಗರದ ವಿನಾಯಕ ಯುವಕರ ಸಂಘದವರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿದ್ಯುತ್‍ದೀಪಗಳಿಂದ ಅಲಂಕರಿಸಲಾಗಿದ್ದ ತೇರಿನ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ದು ಬೆಳಗಿನ ಜಾವ 5.30ಕ್ಕೆ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಅತಿ ವಿಜೃಂಭಣೆಯಿಂದ ಆಚರಿಸಲ್ಪಡುವ ಪೊನ್ನಂಪೇಟೆಯ ಗೌರಿ ಗಣೇಶೋತ್ಸವಕ್ಕೆ ಕಳೆದೆರಡು ದಿನಗಳಿಂದ ಮಳೆರಾಯ ಬಿಡುವು ನೀಡಿತ್ತು. ಅಕ್ಕ ಪಕ್ಕದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನಸ್ತೋಮ ರಾತ್ರಿ 8 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆಯವರೆಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಬ್ಯಾಂಡ್ ಸೆಟ್, ಡಿಜೆಗೆ ಕುಣಿದು ಕುಪ್ಪಳಿಸಿದರು. ಮಹಿಳೆಯರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ಕೃಷ್ಣ ನಗರದ ಯವಕರ ಸಂಘದವರು ಸಿಡಿ ಮದ್ದುಗಳನ್ನು ಸಿಡಿಸುವ ಮೂಲಕ ಆಗಸದಲ್ಲಿ ಬಣ್ಣದ ಚಿತ್ತಾರವನ್ನು ಮೂಡಿಸಿದರು. ಸಂಜೆ ಬಸವೇಶ್ವರ ದೇವಸ್ಥಾನದ ಮುಂಭಾಗ ರಸ ಮಂಜರಿ ಏರ್ಪಡಿಸಲಾಗಿತ್ತು. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್, ಕುಟ್ಟ ವೃತ್ತ ನಿರೀಕ್ಷಕ ಪರಶಿವ ಮೂರ್ತಿ, ಪೊನ್ನಂಪೇಟೆ ಠಾಣಾಧಿಕಾರಿ ಗಣಪತಿ, ಗೋಣಿಕೊಪ್ಪ ಠಾಣಾಧಿಕಾರಿ ಬೋಪಣ್ಣ, ಗೋಣಿಕೊಪ್ಪಲು ಕ್ರೈಂ ಬ್ರಾಂಚ್ ಎಸ್.ಐ. ಮಂಚಯ್ಯ ಇವರ ನೇತೃತ್ವದಲ್ಲಿ ಎರಡು ಜಿಲ್ಲಾ ಶಸÀಸ್ತ್ರ ಮೀಸಲು ಪಡೆಯ ವಾಹನಗಳಲ್ಲಿ ಕುಟ್ಟ, ಶ್ರೀಮಂಗಲ, ಗೋಣಿಕೊಪ್ಪ, ವೀರಾಜಪೇಟೆ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಮೆರವಣಿಗೆಯ ಸಂದರ್ಭ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

-ಚನ್ನನಾಯಕ