ಸೋಮವಾರಪೇಟೆ: ಮಲೆಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಓಣಂ ಹಬ್ಬವನ್ನು ಸಮುದಾಯ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಿದರು.
ಬೆಳಗ್ಗೆ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸಮುದಾಯ ಬಾಂಧವರು, ಮನೆಯ ಎದುರು ಹೂವಿನ ರಂಗೋಲಿ (ಪೂಕಳಂ) ನಿರ್ಮಿಸಿ ಸಾಂಪ್ರಾದಾಯಿಕ ಆಚರಣೆಯಲ್ಲಿ ಭಾಗಿಯಾದರು.
ಸೋಮವಾರಪೇಟೆ ಪಟ್ಟಣದ ಶ್ರೀಮುತ್ತಪ್ಪ ದೇವಾಲಯ, ಐಗೂರಿನ ಮುತ್ತಪ್ಪ, ಗುಳಿಗಪ್ಪ ದೇವಾಲಯ ಸೇರಿದಂತೆ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ಹೊಸಬಟ್ಟೆ ತೊಟ್ಟು, ಮನೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸಿ, ನೆಂಟರಿಷ್ಟರು, ಸ್ನೇಹಿತರೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.ಸಿದ್ದಾಪುರ: ನೆಲ್ಲಿಹುದಿಕೇರಿ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಓಣಂ ಆಚರಣೆ ಮಾಡಿದರು. ಕೇಂದ್ರದಲ್ಲಿ ಆಶ್ರಯ ಪಡೆದಿರುವ ಎಲ್ಲಾ ಧರ್ಮದವರು ಸೇರಿಕೊಂಡು ಓಣಂ ಹಬ್ಬವನ್ನು ಆಚರಿಸಿದರು. ಸರ್ಕಾರಿ ಶಾಲೆಯ ಪರಿಹಾರ ಕೇಂದ್ರದ ಅಂಗಳದಲ್ಲಿ ಹೂವಿನ ರಂಗೋಲಿ ಹಾಕಿ ಸಾಂಪ್ರದಾಯಿಕವಾಗಿ ಎಲ್ಲರೂ ಜಾತಿ ಭೇದ ಮರೆತು ಸೌಹಾರ್ದತೆ ಮೆರೆದರು.ಒಡೆಯನಪುರ: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮಾಲಂಬಿ, ಕಣಿವೆ ಬಸವನಹಳ್ಳಿ, ಹೊಸಗುತ್ತಿ, ಮುಳ್ಳೂರು, ನಿಡ್ತ, ಗೋಪಾಲಪುರ, ಶನಿವಾರಸಂತೆ ಪಟ್ಟಣ, ದುಂಡಳ್ಳಿ ಮುಂತಾದ ಕಡೆಗಳಲ್ಲಿ ಮಲೆಯಾಳಿ ಬಾಂಧವರು ಓಣ ಹಬ್ಬವನ್ನು ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದರು.ಕುಶಾಲನಗರ: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ತಮ್ಮ ಮನೆ ಮುಂದೆ ಹೂವಿನ ರಂಗೋಲಿ ರಚಿಸಿ ಮಹಿಳೆÉಯರು ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಹಬ್ಬದಲ್ಲಿ ಪಾಲ್ಗೊಂಡರು.ಮಡಿಕೇರಿ: ಮೂರ್ನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ವತಿಯಿಂದ ಓಣಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೇವಾಲಯದ ಆವರಣದಲ್ಲಿ ಮಹಾಬಲೇಶ್ವರ ಭಟ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯವನ್ನು ನಡೆಸಲಾಯಿತು.
ಸಪ್ನ ಚಂದ್ರಶೇಖರ್ ಕುಟುಂಬಸ್ಥರು ಓಣಂ ಸದ್ಯದ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭ ದೇವಸ್ಥಾನ ಕಾರ್ಯದರ್ಶಿ ಬಿ.ಬಿ. ಜಯಂತಿ, ತಕ್ಕಮುಖ್ಯಸ್ಥರಾದ ಗ್ರೇಸಿ ವಿಜಯ, ಸದಸ್ಯರಾದ ಯಶೋಧ, ಕಾಂಚನ ಭಟ್ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಹಾಜರಿದ್ದರು.ಶನಿವಾರಸಂತೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಿರು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮನೆಮನೆಯ ಅಂಗಳದಲ್ಲೂ ನೂತನ ವಸ್ತ್ರ ಧರಿಸಿದ ಹೆಣ್ಣು ಮಕ್ಕಳು, ಮಹಿಳೆಯರು ವಿವಿಧ ಬಗೆಯ ಬಣ್ಣಗಳ ಹೂವುಗಳಿಂದ ಸುಂದರ ರಂಗೋಲಿ ಬಿಡಿಸಿ ಮಧ್ಯದಲ್ಲಿ ದೀಪ ಬೆಳಗಿಸಿ ದೇವರನ್ನು ಪ್ರಾರ್ಥಿಸಿದರು.