ಮಡಿಕೇರಿ, ಸೆ. 12: ಇಂದು ಮಧ್ಯಾಹ್ನದವರೆಗೆ ಉತ್ತಮ ವಾತಾವರಣದಲ್ಲಿದ್ದ ಭಾಗಮಂಡಲ ಹಾಗೂ ಮಡಿಕೇರಿಗಳಲ್ಲಿ ಸಂಜೆ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿದಿದೆ. ಮಡಿಕೇರಿಯಲ್ಲಿಯಂತೂ ತಡ ರಾತ್ರಿವರೆಗೂ ಮಳೆಯ ರೌದ್ರ ನರ್ತನ ಕಂಡು ಬಂದಿತು. ಪೊನ್ನಂಪೇಟೆಯಲ್ಲಿ ಸಂಜೆ ಕೆಲ ಕಾಲ ಮಳೆಯಾಗಿದ್ದು ಉಳಿದಂತೆ ದಕ್ಷಿಣ ಕೊಡಗಿನ ವೀರಾಜಪೇಟೆ ಮತ್ತಿತರ ಕೆಲವೆಡೆ ತುಂತುರು ಮಳೆ ಬಿಟ್ಟರೆ ಎಲ್ಲೆಡೆ ಉತ್ತಮ ವಾತಾವರಣ ಕಂಡುಬಂದಿತು. ಸೋಮವಾರಪೇಟೆ ತಾಲೂಕಿನಲ್ಲಿಯೂ ಮಳೆ ಕಳೆದೆರಡು ದಿನಗಳಿಂದ ಕ್ಷೀಣಗೊಂಡಿದೆ. ಮಡಿಕೇರಿ-ಭಾಗಮಂಡಲಗಳಲ್ಲಿ ಭಾರೀ ಮಳೆ (ಮೊದಲ ಪುಟದಿಂದ) ನಾಪೋಕ್ಲು ವಿಭಾಗದಲ್ಲಿಯೂ ಮಳೆ ಪ್ರಮಾಣ ಇಳಿದಿದೆ.ಮಡಿಕೇರಿಯ ಜನತೆ ಇಂದು ಸಂಜೆ ಸುರಿಯತ್ತಿದ್ದ ಭಾರೀ ಮಳೆ ಕಂಡು ಮತ್ತೆ ಚಿಂತಾಕ್ರಾಂತರಾಗಿದ್ದಾರೆ.

ಭಾಗಮಂಡಲದ ಕೆಲವು ನಾಗರಿಕರು ‘ಶಕ್ತಿ’ಯೊಂದಿಗೆ ಮಾತನಾಡಿ ಮುಗಿಯದ ಮಳೆ ಆರ್ಭಟದಿಂದ ಬೇಸತ್ತಿದ್ದು ಸದ್ಯದಲ್ಲಿಯೇ ಸ್ಥಳೀಯರು ಮತ್ತು ಜಿಲ್ಲೆಯ ಪ್ರಮುಖರ ನೆರವಿನಿಂದ ಕಾವೇರಿ ಕ್ಷೇತ್ರದಲ್ಲಿ ಸಂಭವಿಸುತ್ತಿರುವ ಈ ಅತಿವೃಷ್ಟಿಯ ದುರಂತಕ್ಕೆ ಅರ್ಹ ಜ್ಯೋತಿಷಿಗಳ ಬಳಿ ತೆರಳಿ ಪರಿಹಾರದ ಕುರಿತು ಮಾರ್ಗದರ್ಶನ ಪಡೆಯಲಿರುವದಾಗಿ ತಿಳಿಸಿದ್ದಾರೆ. ಇದುವರೆಗೂ ಧಾರ್ಮಿಕ ನೆಲೆಯನ್ನೇ ನಂಬಿಕೊಂಡಿರುವ ತಮಗೆ ಈಗಿನ ದುಸ್ಥಿತಿಯಿಂದ ತೀವ್ರ ಖೇದವುಂಟಾಗಿದ್ದು ಧಾರ್ಮಿಕ ವಿಧಿ ವಿಧಾನಗಳಲ್ಲಿಯೇ ನಂಬಿಕೆ ಕಳೆದುಕೊಳ್ಳುವಂತಹ ಸ್ಥಿತಿ ತಲುಪಿದೆ ಎಂದು ಹೆಸರು ಬಹಿರಂಗಗೊಳಿಸಲು ಇಚ್ಚಿಸದ ಈ ಮಂದಿ ಅಭಿಪ್ರಾಯ ವ್ಯಕ್ತಗೊಳಿಸಿದರು.

ಇಂದು ಮಳೆ ನಕ್ಷತ್ರ ಹುಬ್ಬಾ ಅವಧಿ ಮುಕ್ತಾಯಗೊಳ್ಳುತ್ತಿದ್ದು ಶುಕ್ರವಾರ ಉತ್ತರಾ ನಕ್ಷತ್ರ ಪ್ರವೇಶಿಸುತ್ತ್ತಿದ್ದು ಇನ್ನಾದರೂ ಮಳೆ ನಿಲ್ಲಬಹುದೇನೋ ಎಂದು ಈ ಮಂದಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.