ಗೋಣಿಕೊಪ್ಪ ವರದಿ, ಸೆ. 12 : ಇಲ್ಲಿನ ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2018-19 ನೇ ಸಾಲಿನಲ್ಲಿ ರೂ. 56.35 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ರಷ್ಟು ಡೆವಿಡೆಂಟ್ ನೀಡಲಾಗುವದು ಎಂದು ಗೋಣಿಕೊಪ್ಪ ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ತಿಳಿಸಿದ್ದಾರೆ.

ಸೊಸೈಟಿಯಲ್ಲಿರುವ 780 ಸದಸ್ಯರು ಹಾಗೂ ಗ್ರಾಹಕರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಪರಿಶ್ರಮದಿಂದ ಪ್ರಗತಿ ಸಾಧನೆ ಹೆಚ್ಚಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದಸ್ಯರಿಂದ 43.16 ಲಕ್ಷ ಪಾಲು ಬಂಡವಾಳ ಹೊಂದಿದೆ. ರೂ. 5.08 ಕೋಟಿ ಪಿಗ್ಮಿ ಠೇವಣಿ, ರೂ. 97 ಲಕ್ಷದ ಉಳಿತಾಯ ಠೇವಣಿ, ರೂ. 8.04 ಕೋಟಿ ನಿರಖು ಠೇವಣಿ, ರೂ. 40 ಲಕ್ಷ ಇತರ ಠೇವಣಿ ಸೇರಿ ಒಟ್ಟು ರೂ. 14.49 ಕೋಟಿ ಠೇವಣಿ ಹೊಂದಿದೆ. ಗೋಣಿಕೊಪ್ಪ, ವಿರಾಜಪೇಟೆ, ಸಿದ್ದಾಪುರ ಕೆಡಿಸಿಸಿ ಬ್ಯಾಂಕ್‍ನಲ್ಲಿ ರೂ. 1.57 ಕೋಟಿ ಭದ್ರತಾ ಠೇವಣಿ ಇಡಲಾಗಿದೆ. ಇದನ್ನು ರೂ. 2 ಕೋಟಿಗೆ ವಿಸ್ತರಿಸುವ ಯೋಜನೆ ರೂಪಿಸಿಕೊಳ್ಳಲಾಗಿದೆ. ಕಟ್ಟಡದ ಮಳಿಗೆಗಳಿಂದ ಬರುವ ಬಾಡಿಗೆ ಹಣ ರೂ. 15.41 ಲಕ್ಷ ಹಣವನ್ನು ಠೇವಣಿಯಲ್ಲಿಡಲಾಗಿದೆ ಎಂದು ತಿಳಿಸಿದರು.

ಪಿಗ್ಮಿ ಸಂಗ್ರಹದಿಂದ ಹೆಚ್ಚು ಲಾಭಾಂಶ ಬರುತ್ತಿದ್ದು, ಇದರಲ್ಲಿ ಹೆಚ್ಚು ಸಾಲ ಕೂಡ ನೀಡಲಾಗುತ್ತಿದೆ. ಜಾಮೀನು ಸಾಲ, ಪಿಗ್ಮಿ ಸಾಲ, ನಗದು, ಓ.ಡಿ. ಸಾಲ, ಗಿರವಿ ಸಾಲ, ಆಭರಣ ಸಾಲ ಹಾಗೂ ಇತರೆ ಸಾಲ ಸೇರಿ ಒಟ್ಟು ರೂ. 13.16 ಕೋಟಿ ಸಾಲ ನೀಡಲಾಗಿದೆ. ಶೇ. 81 ರಷ್ಟು ಸಾಲ ವಸೂಲಾತಿಯಾಗಿದೆ. ವೀರಾಜಪೇಟೆ, ಶ್ರೀಮಂಗಲ ಶಾಖೆ ಕೂಡ ಪ್ರಗತಿಯಲ್ಲಿದ್ದು, ಶೇ. 100 ರಷ್ಟು ಸಾಲ ಮರು ಪಾವತಿಗೆ ಸದಸ್ಯರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಸದಸ್ಯರ ಮಕ್ಕಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡಲು ಸಹಾಯ ಧನ ನೀಡಲಾಗುತ್ತಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನ, ಆಡಳಿತ ಮಂಡಳಿ ಸದಸ್ಯರ ಭತ್ಯೆ ಹಣವನ್ನು ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು 7 ವಿದ್ಯಾರ್ಥಿಗಳ ಕಾಲೇಜು ಶುಲ್ಕ ಕಟ್ಟಲಾಗಿದೆ. ಇದರಿಂದ ಸದಸ್ಯರಲ್ಲದವರ ಬಡ ಮಕ್ಕಳಿಗೂ ಪ್ರೋತ್ಸಾಹ ದೊರೆತಂತಾಗಿದೆ ಎಂದರು.

ಸೊಸೈಟಿಯ ಮೂರು ಜಾರಿಗೊಳಿಸಲಾಗುತ್ತಿದೆ. ವಿರಾಜಪೇಟೆ ಶಾಖೆಗೆ ಸ್ವಂತ ಕಟ್ಟಡ ಕಟ್ಟುವ ಗುರಿ ಹೊಂದಲಾಗಿದೆ. ಇಂಟರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ನಿರಖು ಠೇವಣಿದಾರರಿಗೆ ರಾಷ್ಟ್ರೀಕೃತ, ಸಹಕಾರ ಸಂಘಗಳ ಬ್ಯಾಂಕ್‍ಗಳಿಗಿಂತಲೂ ಶೇ. 1 ರಷ್ಟು ಹೆಚ್ಚು ಬಡ್ಡಿದರ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಶೇ. 0.5 ರಷ್ಟು ಬಡ್ಡಿ ಹೆಚ್ಚು ನೀಡಲಾಗುತ್ತಿದೆ. ಸದಸ್ಯರು ಮರಣಪಟ್ಟ ಸಂದರ್ಭ ಸೊಸೈಟಿ ವತಿಯಿಂದ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಪುಷ್ಪಗುಚ್ಚ ಅರ್ಪಿಸುವ ಮೂಲಕ ಸೊಸೈಟಿ ಹಾಗೂ ಸದಸ್ಯರ ಸಂಬಂಧವನ್ನು ಸಮಾಜಕ್ಕೆ ತಿಳಿಸುವ ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ. ಸದಸ್ಯರು ಪ್ರಗತಿಯ ಬಗ್ಗೆ ಹೆಚ್ಚು ಕಾಳಜಿವಹಿಸಲು ಮುಂದಾಗಬೇಕು ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್. ಪ್ರಕಾಶ್, ಸುಮಿ ಸುಬ್ಬಯ್ಯ, ಎನ್. ಕೆ. ದೇವಯ್ಯ, ಪೊನ್ನಿಮಾಡ ಸುರೇಶ್, ಎ.ಜೆ. ಬಾಬು, ಎ.ಕೆ. ಉಮ್ಮರ್, ಪ್ರಭಾರ ಸಿ.ಇ.ಒ. ಬಿ.ಇ. ಕಿರಣ್ ಉಪಸ್ಥಿತರಿದ್ದರು.