ಸೋಮವಾರಪೇಟೆ, ಸೆ. 12: ಪ್ರಸಕ್ತ ವರ್ಷ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಮಂದಿಗೆ ಕನಿಷ್ಟ 1 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್‍ನಿಂದ ತಾಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಾಕೃತಿಕ ವಿಕೋಪದಿಂದ ಉತ್ತರ ಕರ್ನಾಟಕ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರಾಗಿರುವ ಮಂದಿಗೆ ಸರ್ಕಾರ ನೀಡುತ್ತಿರುವ ಬಿಡಿಗಾಸು ಪರಿಹಾರದಿಂದ ಯಾವದೇ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆ ಪರಿಹಾರ ಮೊತ್ತವನ್ನು ರೂ. 1ಲಕ್ಷಕ್ಕೆ ಏರಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಆಗ್ರಹಿಸಿದರು.

ಕರ್ನಾಟಕದಿಂದ 25 ಸಂಸದರನ್ನು ಗೆಲ್ಲಿಸಿದ್ದರೂ ಕೇಂದ್ರ ಸರ್ಕಾರದಿಂದ ಕರ್ನಾಟಕದಿಂದ ಯಾವದೇ ಪ್ರಯೋಜನವಾಗುತ್ತಿಲ್ಲ. ಉತ್ತರ ಕರ್ನಾಟಕದಿಂದಲೇ ಅತೀ ಹೆಚ್ಚು ಸಂಸದರು ಕೇಂದ್ರವನ್ನು ಪ್ರತಿನಿಧಿಸುತ್ತಿದ್ದರೂ ಅನುದಾನ-ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಅವರು ಹೆಸರಿಗೆ ಮಾತ್ರ ಮುಖ್ಯಮಂತ್ರಿ ಯಾಗಿದ್ದು, ಕರ್ನಾಟಕದಲ್ಲಿ ಸರ್ಕಾರ ಇದೆಯೇ? ಎಂಬ ಸಂಶಯವನ್ನು ಹುಟ್ಟುಹಾಕಿದೆ ಎಂದು ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಮಧ್ಯೆ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಪ್ರಳಯ ಪೀಡಿತ ಪ್ರದೇಶಗಳಿಗೆ ಬೂಟಾಟಿಕೆಯ ಭೇಟಿ ನೀಡುತ್ತಿದ್ದಾರೆ. ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನೂ ವಿತರಿಸುತ್ತಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ಪದಾಧಿಕಾರಿಗಳು, ತಕ್ಷಣ ತಲಾ 1ಲಕ್ಷ ಪರಿಹಾರ ವಿತರಿಸಬೇಕು. ಅವರುಗಳ ಭವಿಷ್ಯವನ್ನು ಪುನರ್‍ನಿರ್ಮಿಸಲು ಯೋಜನೆ ಸಿದ್ಧಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭ ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಉಪಾಧ್ಯಕ್ಷ ಬಿ.ಬಿ. ಸತೀಶ್, ಯುವ ಕಾಂಗ್ರೆಸ್‍ನ ಚೇತನ್, ವಲಯ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್, ಶನಿವಾರಸಂತೆಯ ರಂಗಸ್ವಾಮಿ, ಹೆಚ್.ಎ. ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹೊಳೆ ಬದಿ ಮನೆ ನಿರ್ಮಾಣಕ್ಕೆ ಅವಕಾಶವಿಲ್ಲ

ವಾಲ್ನೂರು-ತ್ಯಾಗತ್ತೂರು ಗ್ರಾಮಸಭೆ

*ಸಿದ್ದಾಪುರ, ಸೆ. 12: ಹೊಳೆ ಬದಿಯ 100 ಮೀಟರ್ ಜಾಗದೊಳಗೆ ಮನೆ ನಿರ್ಮಿಸುವಂತಿಲ್ಲ ಗದ್ದೆ ಜಾಗದಲ್ಲೂ ವಸತಿ ನಿರ್ಮಿಸಲು ಅವಕಾಶವಿಲ್ಲ ಎಂಬ ನಿರ್ಣಯವನ್ನು ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ವಾಲ್ನೂರು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಅಧ್ಯಕ್ಷೆ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾಲ್ನೂರು ಗ್ರಾಮದಲ್ಲಿ ಈ ಬಾರಿ ನೆರೆಯಿಂದ ಹೊಳೆ ಕರೆಯಲ್ಲಿದ್ದ 2 ವಾಸದ ಮನೆ ಕುಸಿದು ಬಿದ್ದಿದೆ 28 ಮನೆಗೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಹೊಳೆ ಕರೆಯಲ್ಲಿ ಯಾರೂ ಮನೆ ನಿರ್ಮಿಸಬಾರದು. ಗದ್ದೆಯಲ್ಲೂ ಮನೆ ನಿರ್ಮಿಸಲು ಅವಕಾಶ ನೀಡಬಾರದೆಂದು ಸದಸ್ಯರುಗಳು ಒತ್ತಾಯಿಸಿದ ಮೇರೆಗೆ ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ರವಾನಿಸಲು ತೀರ್ಮಾನಿಸಲಾಯಿತು.

ಈಗಾಗಲೇ ವಾಲ್ನೂರು ಗ್ರಾಮದ ಸರ್ವೆ ನಂ. 188/1 ಈ ಸರಕಾರಿ ಜಾಗ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಿ ಹೊಳೆ ಕರೆ 28 ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲು ಸಭೆ ನಿರ್ಧರಿಸಿತು. ಗ್ರಾ.ಪಂ. ಉಪಾಧ್ಯಕ್ಷ ಸತೀಶ, ಪಿಡಿಓ ಅನಿಲ್, ಗ್ರಾ.ಪಂ. ಸದಸ್ಯರುಗಳಾದ ಅಂಚೆಮನೆ ಸುಧಿ, ಹೆಚ್.ಎನ್. ಕಮ¯ಮ್ಮ, ಭುವನೇಂದ್ರ, ಜಮೀಲ, ಸಲೀಂ ಹಾಗೂ ಸವಿತಾ ಸಭೆಯಲ್ಲಿ ಹಾಜರಿದ್ದರು.