ಮಡಿಕೇರಿ, ಸೆ. 10: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಬೆಂಗಳೂರು ಕೊಡವ ಸಮಾಜದಲ್ಲಿ ನಿನ್ನೆ ಕೊಡಗಿನ ಸಾಂಪ್ರದಾಯಿಕ ಹಬ್ಬವಾದ ‘ಕೈಲ್ ಪೊಳ್ದ್’ ಅಂಗವಾಗಿ ಏರ್ಪಡಿಸಲಾಗಿದ್ದ ಸಂತೋಷ ಕೂಟ ಕಾರ್ಯಕ್ರಮ ಸಂಭ್ರಮದೊಂದಿಗೆ ಅರ್ಥಪೂರ್ಣವಾಗಿ ಜರುಗಿತು. ಸಾವಿರಾರು ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮ ರಾಜಧಾನಿಯಲ್ಲಿ ಕೊಡಗಿನ ಹಬ್ಬದ ಮಹತ್ವದ ಸಾರವನ್ನು ಪಸರಿಸಿತು.
ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಆಯೋಜಿತಗೊಂಡಿದ್ದ ಕಾರ್ಯಕ್ರಮದಲ್ಲಿ ಆಯುಧ ಪೂಜೆ, ಶಿಕ್ಷಣ, ಕ್ರೀಡಾ ಸಾಧಕರಿಗೆ ಸನ್ಮಾನ, ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ರಂಜಿಸಿತು. ವಿಶೇಷವಾಗಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ಜಸ್ಟೀಸ್ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರು ಮುಖ್ಯ ಅತಿಥಿಗಳಾಗಿದ್ದು ಇವರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು.
ಮದ್ಯ ಬಳಕೆಗೆ ಕಡಿವಾಣ ಸ್ವಾಗತ
ಜಸ್ಟೀಸ್ ಬೋಪಣ್ಣ ಅವರು ಕೊಡವ ಸಂಸ್ಕøತಿ - ಸಂಪ್ರದಾಯದ ಮಹತ್ವ, ಯುವ ಜನಾಂಗಕ್ಕೆ ಸಾಧನೆ ತೋರಲು ಇರುವ ಅವಕಾಶದ ಕುರಿತು ಉಲ್ಲೇಖಿಸಿದರಲ್ಲದೆ, ಕೊಡವರ ಗಂಗಾಪೂಜೆ ಶಾಸ್ತ್ರದ ಸಂದರ್ಭದಲ್ಲಿ ಪ್ರಸ್ತುತ ಮದ್ಯ ಬಳಕೆಗೆ ಕಡಿವಾಣ ಹಾಕಲಾಗುತ್ತಿರುವ ದಿಟ್ಟ ನಿರ್ಧಾರದ ಬಗ್ಗೆ ಹರ್ಷವ್ಯಕ್ತಪಡಿಸಿ ಇದನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ವಿವಿಧ ವಿಭಾಗದಲ್ಲಿ ಸಾಧನೆ ಮಾಡಿರುವ ಕೊಡಗು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಸೇರಿದಂತೆ 96 ಮಂದಿಯನ್ನು ಸಮಾಜದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಇದರೊಂದಿಗೆ ಕ್ರೀಡೆಯಲ್ಲಿ ಸಾಧನೆ ತೋರಿರುವ ಫೆನ್ಸಿಂಗ್ನ ಕೆಚ್ಚೆಟ್ಟಿರ ವಿಜಯ್ ಉತ್ತಯ್ಯ, ಈಜು ವಿಭಾಗದಲ್ಲಿನ ಬಡುವಮಂಡ ಆದಿತ್ಯ, ಪೊಲೀಸ್ ಇಲಾಖೆಯ ಸಾಧಕ ಆಲ್ಮಚಂಡ ಪಳಂಗಪ್ಪ, ಹಾಕಿಯಲ್ಲಿ ಪುಳ್ಳಂಗಡ ರೋಹಿಣಿ ಬೋಪಣ್ಣ, ಎನ್ಸಿಸಿ ಸಾಧಕಿ ಮೂಡೆರ ಲೀಲಾ ಪೊನ್ನಪ್ಪ, ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು.
ಇದರೊಂದಿಗೆ ಎಂಸಿಎ ಸಾಧಕಿ ಕರ್ತಮಾಡ ನಿಧಿ ಹರೀಶ್, ಇಂಜಿನಿಯರಿಂಗ್ನಲ್ಲಿ ಕುಕ್ಕೆರ ಶಾಯರಿ ಅಯ್ಯಪ್ಪ, ಬಿಡಿಎಸ್ನಲ್ಲಿ ಕೋದಂಡ ಸಿ. ಪೊನ್ನಮ್ಮ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ.ನಾಣಯ್ಯ ಹಾಗೂ ಆಡಳಿತ ಮಂಡಳಿಯವರು ಜಸ್ಟೀಸ್ ಬೋಪಣ್ಣ ಅವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಮಲ್ಲೇಂಗಡ ಮೀರಾ ಜಲಜ ಕುಮಾರ್, ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ, ಸಹ ಕಾರ್ಯದರ್ಶಿ ಕೊಕ್ಕಲೆರ ಕುಟ್ಟಪ್ಪ, ಖಜಾಂಚಿ ಉಳ್ಳಿಯಡ ವಿದ್ವಾನ್ ಅಯ್ಯಪ್ಪ, ಜಂಟಿ ಖಜಾಂಚಿ ಬಾಳೆಕುಟ್ಟಿರ ರಘು ನಂಜಪ್ಪ ಉಪಸ್ಥಿತರಿದ್ದರು. ಈ ಸಂದರ್ಭ 1911 ರಿಂದ ಕೊಡವ ಸಮಾಜದ ನಡೆದುಕೊಂಡು ಬಂದ ಬಗ್ಗೆ ವೀಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು.
ಮಲ್ಲೇಂಗಡ ಎಸ್. ಮುತ್ತಣ್ಣ ಹಾಗೂ ಪಳಂಗಂಡ ರೀಟಾ ಕಾರ್ಯಕ್ರಮ ನಿರೂಪಿಸಿದರು. ಈ ಮುನ್ನ ಅತಿಥಿಗಳನ್ನು ಒಡ್ಡೋಲಗ, ದುಡಿಕೊಟ್ಟ್ಪಾಟ್ ಸಹಿತವಾಗಿ ಕರೆ ತಂದು ಆಯುಧ ಪೂಜೆ ನೆರವೇರಿಸಲಾಯಿತು. ಅಪರಾಹ್ನ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.