ಮಡಿಕೇರಿ, ಸೆ. 10: ಮಕ್ಕಳಲ್ಲಿನ ಅಪೌಷ್ಟಿಕತೆ ಹಾಗೂ ರಕ್ತ ಹೀನತೆ ಕಡಿಮೆ ಮಾಡುವದು ಮತ್ತಿತರ ಸಂಬಂಧ ಗಿರಿಜನ ಹಾಡಿಗಳಲ್ಲಿ ಹೆಚ್ಚಿನ ಒತ್ತು ನೀಡಿ ‘ಪೋಷಣ ಅಭಿಯಾನ ಯೋಜನೆ’ಯ ಪೋಷಣ ತಿಂಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅಧಿಕಾರಿಗಳಿಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಚರಿಸುವ ಪೋಷಣ ತಿಂಗಳು ಪೋಷಣ ಅಭಿಯಾನ ಯೋಜನೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮ ಪಡಿಸುವ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ವಿವಿಧ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು. ಅಭಿಯಾನವನ್ನು ಪ್ರಾಮಾಣಿಕ ಪ್ರಯತ್ನದಿಂದ ಜಿಲ್ಲೆಯ ಎಲ್ಲಾ ಅರ್ಹ ತಾಯಿ ಮತ್ತು ಮಗು ಫಲಾನುಭವಿಗಳಿಗೆ ತಲಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನ ಕಾರ್ಯಕ್ರಮಾಧಿಕಾರಿ ಅರುಂಧತಿ ಅವರು ಸಭೆಗೆ ಪೋಷಣ ಅಭಿಯಾನ ಕಾರ್ಯಕ್ರಮದ ರೂಪುರೇಷೆಗಳ ಮಾಹಿತಿ ನೀಡಿದರು.
ತಾಯಿ ಮತ್ತು ಮಗುವಿನಲ್ಲಿ ಅಪೌಷ್ಟಿಕತೆ ನಿವಾರಣೆ ಮಾಡುವದು ಆರೋಗ್ಯ ಸುಧಾರಣೆ, ಸ್ವಚ್ಛತೆ ಹೀಗೆ ಹಲವು ಆಯಾಮಗಳಲ್ಲಿ ತಾಯಿ ಮಗುವಿನ ಆರೋಗ್ಯವನ್ನು ಉತ್ತಮಪಡಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರಾಧಾ, ಜಿ.ಪಂ. ಶ್ರೀಕಂಠಮೂರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ರೇವಣ್ಣ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಗೌರವ್ ಶೆಟ್ಟಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಓಗಳು ಹಾಗೂ ಇತರರು ಇದ್ದರು.